ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.17: ಭಾರತದಂತಹ ರಾಷ್ಟ್ರಗಳಲ್ಲಿ ಸಾಮಾನ್ಯರಿಗೂ ಆರೋಗ್ಯದ ತರಬೇತಿಗಳು ಅವಶ್ಯಕವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನ, ಎದನೋವು, ಪಾಶ್ರ್ವವಾಯು, ವಿಷ ಸೇವನೆಯಂತಹ ಪ್ರಕರಣಗಳು ಗಂಭೀರವಾಗಿ ಅಧಿಕವಾಗುತ್ತಿದ್ದು, ಇಂತಹ ಪ್ರಕರಣಗಳು ಸಮುದಾಯದಲ್ಲಿಯೇ ಸೂಕ್ತ ರೀತಿಯ ಜ್ಞಾನ ಕೌಶಲಗಳಿಂದ ಸಾವು ನೋವುಗಳನ್ನು, ತಡೆಯಲು ಅವಶ್ಯಕವಾಗಿದೆ ಎಂದು ಬೆಂಗಳೂರಿನ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕರಾದ ಡಾ. ಪರಿಮಳ ಎಸ್. ಮರೂರು ತಿಳಿಸಿದರು.
ಇಂದು ಮಾಗಡಿ ರಸ್ತೆಯ ಆರೋಗ್ಯ, ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ ವತಿಯಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಹಾಗೂ ನಮ್ಮ ಮೆಟ್ರೋ ಬೆಂಗಳೂರಿನ ಸಿಬ್ಬಂದಿಗೆ ಆಯೋಜಿಸಿದ್ದ ಪ್ರತಿಸ್ಪಂದಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಿರೀಕ್ಷಿತವಾಗಿ ಉಂಟಾಗುವ ಸಾವು ನೋವುಗಳನ್ನು ಕಡಿಮೆ ಮಾಡಲು ಎಲ್ಲರಿಗೂ ಪ್ರಥಮ ಪ್ರತಿ ಸ್ಪಂದಕರ ತರಬೇತಿ ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಸ್ವಾಭಾವಿಕ ಹಾಗೂ ಸಾಂದರ್ಭಿಕ ಅವಗಡಗಳಲ್ಲಿ ಸಾವು-ನೋವುಗಳು ಅಧಿಕವಾಗುತ್ತಿದ್ದು, ಇಂತಹ ಪ್ರಕರಣಗಳನ್ನು ತ್ವರಿತವಾಗಿ ಆರೈಕೆ ಮಾಡಲು ಪ್ರಥಮ ಪ್ರತಿಸ್ಪಂದಕರ ತರಬೇತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾಗವಹಿಸಿರುವ ಎಲ್ಲಾ ಪ್ರಶಿಕ್ಷಣಾರ್ಥಿಗಳು ತರಬೇತಿಯನ್ನು ಗರಿಷ್ಠ, ಪ್ರಮಾಣದಲ್ಲಿ ಉಪಯೋಗಿಸಿಕೊಂಡು ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲು ಸಹಕರಿಸಬೇಕಾಗಿ ಎಂದು ಬೆಂಗಳೂರಿನ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಅಪರ ನಿರ್ದೇಶಕರಾದ ಡಾ. ಪುಷ್ಪಲತಾ ಬಿ.ಎಸ್ ಕರೆ ನೀಡಿದರು.
ಈ ಪ್ರಥಮ ಪ್ರತಿಸ್ಪಂದಕರ ತರಬೇತಿಯು ಕೇಂದ್ರ ಸರ್ಕಾರದ ನಿಯಮಗಳಂತೆ ಸಾರ್ವಜನಿಕರಿಗೂ, ಸಂಘ – ಸಂಸ್ಥೆಗಳಿಗೂ ಮತ್ತು ಎಲ್ಲ್ಲರಿಗೂ ನೀಡಿದರೆ ಎಲ್ಲಾ ರೀತಿಯ ಅವಗಡಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಉಪನಿರ್ದೇಶಕರಾದ ಡಾ. ಚಿದಾನಂದ ಹೆಚ್. ಗುಡೂರ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಪ್ರಾಂಶುಪಾಲರಾದ ಡಾ. ಮಂಜುಳ ದೇವಿ ಸೇರಿದಂತೆ ಸುಮಾರು 50 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.