ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.೨೪: ಸರ್ಕಾರವು ವಿವಿಧ ವರ್ಗದ ಜನರಿಗೆಂದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಂತೆಯೇ ತೃತೀಯ ಲಿಂಗಿಗಳ ಸಬಲೀಕರಣಕ್ಕಾಗಿಯೂ ಹಲವು ಯೋಜನೆಗಳನ್ನು ಸರ್ಕಾರವು ಪರಿಚಯಿಸಿದ್ದು, ಆ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ಪಡೆದು, ಸಬಲೀಕರಣಗೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ತೃತೀಯ ಲಿಂಗಿಗಳಿಗೆ ಬೆಂಗಳೂರು ನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಕೆ.ಸುಬ್ಬಾನಾಯಕ್ ಅವರು ಕರೆ ನೀಡಿದರು.
ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿರುವ ರುಡ್ಸೆಟ್ ಸಂಸ್ಥೆಯಲ್ಲಿ “ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ”ಯಡಿ ಫಲಾನುಭವಿಗಳಾಗಿ ಆಯ್ಕೆಯಾಗಿದ್ದ ತೃತೀಯ ಲಿಂಗಿಗಳಿಗೆ ನೀಡಲಾದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲಾ ಸಾಮಾನ್ಯ ಜನರಂತೆ ಬದುಕುವ ಅವಕಾಶ ತೃತೀಯ ಲಿಂಗಿಗಳಿಗಿದ್ದು, ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ವಿವಿಧ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಎಲ್ಲರಂತೆಯೇ ತೃತೀಯ ಲಿಂಗಿಗಳಿಗೂ ಸರ್ಕಾರ ಕಲ್ಪಿಸಿದ್ದು, ನಿಮ್ಮ ಹಕ್ಕನ್ನು ನೀವೇ ಗೌರವಿಸಿ, ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿಯಾದ ಸೌಭಾಗ್ಯ ಅವರು ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ತೃತೀಯ ಲಿಂಗಿಗಳಿಗಾಗಿ “ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ”ಯಡಿ ಸಾಲ ಸೌಲಭ್ಯ ಕಲ್ಪಿಸುವುದು ಮಾತ್ರವಲ್ಲದೆ, ಸ್ವಂತ ಉದ್ಯೋಗವನ್ನು ಮಾಡಲು ಅಗತ್ಯವಿರುವ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ಸಹ ಕೊಡಿಸಲಾಗುತ್ತಿದ್ದು, ತರಬೇತಿಯನ್ನು ಸದುಪಯೋಗಪಡಿಕೊಳ್ಳುವಂತೆ ತಿಳಿಸಿದರು. ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಜೆ.ಆನಂದ್ ಅವರು ಮಾತನಾಡಿ, ಸಂಸ್ಥೆಯಲ್ಲಿ ತಾವೆಲ್ಲ ಪಡೆದಿರುವ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನುಸಾರ ಸ್ವಂತ ಉದ್ಯಮ ಆರಂಭಿಸಿ, ಗೌರವಯುತವಾಗಿ ಬಾಳುವ ಮೂಲಕ ಸಮಾಜದಲ್ಲಿ ನಿಮ್ಮದೇ ಆದ ಛಾಪನ್ನು ಮೂಡಿಸುವತ್ತ ಶ್ರಮಿಸಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ವಿ.ರವೀಂದ್ರ, ವಿದ್ಯಾ ಹೊಸಮನಿ, ಕಚೇರಿ ಸಹಾಯಕರಾದ ಶ್ರೀನಿವಾಸ್, ಅರುಣ್ಕುಮಾರ್ ಸೇರಿದಂತೆ ಲಿಂಗತ್ವ ಅಲ್ಪಸಂಖ್ಯಾತ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.