ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.4: ಎರಡು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೆ ಸೊರಗಿರುವ ಬಿಬಿಎಂಪಿಗೆ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಉತ್ಸುಕವಾದಂತಿದೆ.
ಈ ವಿಷಯವನ್ನು ಸ್ಪಷ್ಟಪಡಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಹು ನಿರೀಕ್ಷಿತ ಬಿಬಿಎಂಪಿ ಚುನಾವಣೆಯೂ 225 ರಿಂದ 250 ವಾರ್ಡ್ಗಳಿಗೆ ಸೀಮಿತಗೊಳಿಸಿ ಡಿಸೆಂಬರ್ ವೇಳೆಗೆ ನಡೆಯಲಿದೆ ಎಂದು ಹೇಳಿದರು.
ಬಿಎಂಟಿಸಿ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಮಾಧ್ಯಮಗೋಷ್ಠೀಯಲ್ಲಿ ಮಾತನಾಡಿದ ಅವರು, ಡಿಸೆಂಬರ್ಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ. ಚುನಾವಣೆ ನಡೆಸಲು ಸರ್ಕಾರವೂ ಸಹ ಉತ್ಸುಕವಾಗಿದೆ. ಲೋಕಸಭಾ ಚುನಾವಣೆಗೆ ಪೂರ್ವದಲ್ಲಿಯೇ ಬಿಬಿಎಂಪಿ ಚುನಾವಣೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಎಸ್.ಎಂ. ಕೃಷ್ಣ ಸರ್ಕಾರ ಇದ್ದಾಗ ನಿಗದಿತ ಸಮಯಕ್ಕೆ ಪಾಲಿಕೆ ಚುನಾವಣೆ ನಡೆದಿತ್ತು. ಸಿದ್ದರಾಮಯ್ಯ ಅವರು ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಸಹ ಕೇವಲ ಮೂರು ತಿಂಗಳ ವಿಳಂಬ ಆಗಿತ್ತು. ಆದರೆ, ಬಿಜೆಪಿ ಸರ್ಕಾರ ಮಾತ್ರ ನ್ಯಾಯಾಲಯದ ನೆಪ ಹೇಳಿ ಸುಮಾರು ಎರಡು ವರ್ಷಗಳ ಕಾಲ ಚುನವಣೆ ನಡೆಸದೆ ವಿಳಂಬ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಪಾಲಿಕೆಯನ್ನು ವಿಭಜನೆ ಮಾಡುವುದಿಲ್ಲ. ಬದಲಿಗೆ ವಾರ್ಡ್ಗಳ ಸಂಖ್ಯೆಯನ್ನು 225ರಿಂದ 250ರೊಳಗೆ ಪರಿಷ್ಕರಿಸಿ ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಚುನಾವಣೆ ನಡೆಸುವ ಬಗ್ಗೆ ಅನುಮತಿ ಪಡೆಯಲಾಗುವುದು. ಅಷ್ಟೇ ಅಲ್ಲ, ಪಕ್ಷದ ಸಿದ್ಧಾಂತವನ್ನು ಒಪ್ಪಿ, ಯಾವುದೇ ಷರತ್ತುಗಳು ಇಲ್ಲದೆ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದು ಹೇಳಿದರು.
ಲೋಕಸಭೆ-20 ಸ್ಥಾನ ಗುರಿ:
ಸಚಿವರ ದೆಹಲಿ ಯಾತ್ರ ಬಗ್ಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ20 ಸ್ಥಾನಗಳನ್ನು ಗೆಲ್ಲುವ ಗುರಿ ನೀಡಲಾಗಿದೆ. ಅದರಂತೆ ಎಲ್ಲರೂ ಈಗಲೇ ಕೆಲಸ ಆರಂಭಿಸುತ್ತಿದ್ದೇವೆ. ಶೀಘ್ರವಾಗಿ ಅಭ್ಯರ್ಥಿಗಳನ್ನು ಘೋಷಿಸಿ ಎಂಬ ಸಲಹೆಯನ್ನೂ ನೀಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, 20 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ದೇಶದಲ್ಲಿ ಹೋಲಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ಕೋಮುಗಲಭೆ ನಡೆದಿದೆ. ಬಿಜೆಪಿ ಅವಧಿಯಲ್ಲೇ ಹೆಚ್ಚು ಆಗಿದೆ. ಇನ್ನೂ, ಪೊಲೀಸರ ಸಭೆಯಲ್ಲಿ ಯತೀಂದ್ರ ಇದ್ದರೆಂಬ ಕುಮಾರಸ್ವಾಮಿ ಹೇಳಿಕೆಗೆ ಯತೀಂದ್ರ ಅವರೇ ಉತ್ತರ ಕೊಡಬೇಕು ಎಂದ ಅವರು, ತಸ್ತಿಕ್ ಹಣ ನೇರವಾಗಿ ಅರ್ಚಕರ ಅಕೌಂಟ್ ಗೆ ವರ್ಗಾವಣೆಗೆ ಸೂಚನೆ ಕೊಟ್ಟಿದ್ದೇನೆ. ಅರ್ಚಕರ ವೇತನ ಪರಿಷ್ಕರಣೆ ಸದ್ಯಕ್ಕೆ ಇಲ್ಲ ಎಂದು ವಿವರಿಸಿದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಆಚಾರ ವಿಲ್ಲದ ನಾಲಿಗೆ ಎನ್ನುವ ವಚನದಂತೆ ಬಿಜೆಪಿ ನಾಯಕರಿಗೆ ಸಂಸ್ಕೃತಿ ಇಲ್ಲ. ಬಿಜೆಪಿ ಹೇಳೋದು ರಾಮನ ಹೆಸರು ಮಾಡೋದು ರಾವಣನ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆರಗ ಬಾಯಿ ಬಿಟ್ಟರೆ ಬರೀ ಅವಿವೇಕ, ಅಜ್ಞಾನದ ಮಾತುಗಳು ಬರುತ್ತವೆ. ಕೂಡಲೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.