ಸುದ್ದಿಮೂಲ ವಾರ್ತೆ
ಚೇಳೂರು, ನ.20: ಚಿಕ್ಕಬಳ್ಳಾಪುರದ ಚೇಳೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿಂದ ಆಂಬುಲೆನ್ಸ್ ಇಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಬಂದಿದೆ.
ಮೂರು ದಶಕಗಳ ಹಿಂದೆ ಹೋಬಳಿ ಎಂದು ಗುರುತಿಸಿಕೊಂಡ ಚೇಳೂರು ಈಗ ತಾಲ್ಲೂಕು ಆಗಿ ಬದಲಾಗಿದೆ. ನೂತನ ತಾಲ್ಲೂಕಿಗೆ ಆಗಬೇಕಿರುವ ಸೌಲಭ್ಯಗಳು ಸಾಕಷ್ಟಿದ್ದು ಈ ಸಂಬಂಧ ಸಾಕಷ್ಟು ಜಾಗೃತಿ ಮೂಡಿಸಿದರೂ ಸಹ ಅಧಿಕಾರಿಗಳು ಎಚ್ಚತ್ತುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೇಳೂರು ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿಂದ ವೈದ್ಯರು ಹಾಗು ಆಂಬುಲೆನ್ಸ್ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಈ ಸಂಬಂಧ ತಾಲೂಕು ವೈದ್ಯಾಧಿಕಾರಿಗಳು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ಬಂದರೂ ಸಹ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಿಪರ್ಯಾಸ.
ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಬೇರೆ ಆಸ್ಪತ್ರೆಗೆ ಹೋಗೋಣ ಎಂದರೆ ಆಂಬ್ಯುಲೆನ್ಸ್ ಸಹ ಇಲ್ಲ. ಕಾರಣ ಇಲ್ಲಿನ ಜನ ಬಾಗೇಪಲ್ಲಿ ಅಥವಾ ಬಟ್ಲಹಳ್ಳಿ ಆಸ್ಪತ್ರೆಗಳ ಆಂಬುಲೆನ್ಸ್ ಗೆ ಕರೆ ಮಾಡುವ ಪರಿಸ್ಥಿತಿ ಬಂದಿದೆ.
ಅಲ್ಲಿಂದ ಆಂಬುಲೆನ್ಸ್ ಬರುವ ಹೊತ್ತಿಗೆ ಹಲವು ತಾಸುಗಳೇ ಕಳೆದಿರುತ್ತವೆ. ತುರ್ತು ಸಂದರ್ಭದಲ್ಲಿ ರೋಗಿಗಳ ಆರೋಗ್ಯಕ್ಕೆ ತೊಂದರೆಯಾದರೆ ಯಾರು ಹೊಣೆ ಎಂದು ಇಲ್ಲಿನ ಜನ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಹೀಗಾಗಿ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಆರೋಗ್ಯ ಕೇಂದ್ರಕ್ಕೆ ಬೇಕಿರುವ ಆಂಬುಲೆನ್ಸ್ ಹಾಗು ವೈದ್ಯರನ್ನು ನೇಮಿಸಬೇಕು ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸಹ ಇಲ್ಲಿನ ಜನ ನೀಡಿದ್ದಾರೆ.