ಲೋಕಾಯುಕ್ತದಿಂದ ಕುಂದುಕೊರತೆ ಸಭೆ
ಮೀನುಗಾರಿಕೆ ಇಲಾಖೆಗೆ ತರಾಟೆ
ಸುದ್ದಿಮೂಲ ವಾರ್ತೆ
ಚಿಂತಾಮಣಿ, ಅ. 20 : ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಯಾವುದೇ ಕಾರಣಕ್ಕೂ ಅಮಾಯಕ ಜನರನ್ನು ಅಲೆದಾಡಿಸಬಾರದು ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ಉಮೇಶ್ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಲೋಕಾಯುಕ್ತದಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು-ಕೊರತೆಗಳ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಲೋಕಾಯುಕ್ತರ ನಿರ್ದೇಶನದಂತೆ ಪ್ರತಿ ತಿಂಗಳು ಒಂದೊಂದು ತಾಲ್ಲೂಕಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಹಾಗೂ ಅಹವಾಲು ಸ್ವೀಕಾರ ಸಭೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಇಂದಿನ ಸಭೆಗೆ 25 ದೂರುಗಳು ಬಂದಿವೆ. 15 ದಿನಗಳ ಒಳಗೆ ಸಾರ್ವಜನಿಕರ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ದೂರುಗಳಲ್ಲಿ ಶೇ.50 ಕಂದಾಯ ಇಲಾಖೆಗೆ ಸಂಬಂಧಪಟ್ಟಿವೆ. ಶೇ.40 ರಷ್ಟು ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿವೆ. ಮೀನುಗಾರಿಕೆ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ನಗರಸಭೆಗೆ ಸಂಬಂಧಪಟ್ಟ ಒಂದೆರಡು ದೂರುಗಳಿವೆ. ಬಹಳ ದಿನಗಳಿಂದ ಅನಾವಶ್ಯಕವಾಗಿ ತಡ ಮಾಡಿಕೊಂಡು ಬೇಜವಾಬ್ದಾರಿಯಿಂದ ಕೆಲಸ ಮಾಡದೆ ಸಾರ್ವಜನಿಕರಿಗೆ ತೊಂದರೆ ನೀಡಿರುವ 2-3 ಪ್ರಕರಣಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಡಿವೈಎಸ್ಪಿ ವೀರೇಂದ್ರ ಮಾತನಾಡಿ, ನೋಂದವರ ಸಮಸ್ಯೆಗಳನ್ನು ಬಗೆಹರಿಸುವುದು, ಯಾರಾದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಡಮಾಡುತ್ತಿರುವುದು, ಇತರೆ ಯಾವುದೇ ಆಸೆ, ಅಮಿಷಗಳನ್ನು ಒಡ್ಡುವಂತಹವರ ವಿರುದ್ಧ ಕ್ರಮಕೈಗೊಳ್ಳುದು ಲೋಕಾಯುಕ್ತರ ಸಭೆಗಳ ಉದ್ದೇಶವಾಗಿದೆ. ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ಬಲಾಡ್ಯರಾದವರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಸಮಸ್ಯೆ ತುಂಬಾ ಚಿಕ್ಕದಿದ್ದರೂ ಕೆಲವು ಅಧಿಕಾರಿಗಳು ಕುಂಟು ನೆಪಗಳಿಂದ ವಿಳಂಬ, ಅನವಶ್ಯಕವಾಗಿ ಕಾಲ ಕಳೆಯುವುದನ್ನು ತಪ್ಪಿಸುವುದು ಸಭೆಯ ಉದ್ದೇಶವಾಗಿದೆ ಎಂದರು.
ಲೋಕಾಯುಕ್ತ ಇನ್ಸ್ ಸ್ಪೆಕ್ಟರ್ ಶಿವಪ್ರಸಾದ್, ತಾಲ್ಲುಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೌರಾಯುಕ್ತ ಜಿ.ಎನ್.ಚಲಪತಿ, ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು, ಲೋಕಾಯುಕ್ತ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು