ಸುದ್ದಿಮೂಲ ವಾರ್ತೆ
ತುಮಕೂರು, ಏ17: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾತ್ರಿ ವೇಳೆ ಬಳಸುವ ಧ್ವನಿವರ್ಧಕಗಳನ್ನು ಬಳಕೆ ಮಾಡಿದರೆ ಆ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಆಯೋಗ ನಿರ್ದೇಶನ ನೀಡಿದಂತೆ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಚುನಾವಣಾ ಪ್ರಚಾರಕ್ಕಾಗಿ
ಧ್ವನಿವರ್ಧಕಗಳನ್ನು ಬಳಸಬಹುದಾಗಿದೆ. ಈ ನಿರ್ದೇಶನವನ್ನು ಉಲ್ಲಂಘಿಸಿ ನಿಗಧಿಪಡಿಸಿದ ಅವಧಿಗಿಂತ ಮೀರಿ ಬಳಸುವ ಧ್ವನಿವರ್ಧಕಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಕಾರ್ಯಕರ್ತರು
ಚುನಾವಣಾ ಆಯೋಗವು ಅನುಮತಿಸಿರುವ ಅವಧಿಯಲ್ಲಿ ಬಳಸಬಹುದಾಗಿದ್ದು, ಆಯೋಗ ನೀಡಿರುವ ನಿರ್ಬಂಧವನ್ನು ಉಲ್ಲಂಘಿಸುವಂತಿಲ್ಲ ಎಂದು ಹೇಳಿದರು.
ಧ್ವನಿವರ್ಧಕಗಳನ್ನು ಬಳಸುವ ಅವಧಿಯು ವೇದಿಕೆ ಕಾರ್ಯಕ್ರಮವಲ್ಲದೆ ಟ್ರಕ್, ಟೆಂಪೋ, ಕಾರು, ಟ್ಯಾಕ್ಸಿ, ವ್ಯಾನ್, ಮೂರು ಚಕ್ರದ ಸ್ಕೂಟರ್, ಸೈಕಲ್ ರಿಕ್ಷಾ, ಮತ್ತಿತರ ವಾಹನಗಳಿಗೆ ಅಳವಡಿಸಿ ಬಳಸುವುದಕ್ಕೂ ಅನ್ವಯಿಸುತ್ತದೆ. ಈ ವಾಹನಗಳು ಜನವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕ ಬಳಸಿ ಚುನಾವಣಾ ಪ್ರಚಾರ
ಮಾಡುವುದರಿಂದ ಅಲ್ಲಿ ವಾಸಿಸುವ ಜನರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುತ್ತದೆಯಲ್ಲದೆ ಧ್ವನಿವರ್ಧಕಗಳಿಂದಾಗುವ ಶಬ್ದಮಾಲಿನ್ಯದಿಂದ ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಅಧ್ಯಯನಕ್ಕೆ ತೀವ್ರ ತೊಂದರೆಯಾಗುವುದನ್ನು ಮನಗಂಡು ಆಯೋಗ ಈ ಸೂಚನೆಯನ್ನು ನೀಡಿದೆ ಎಂದು ಹೇಳಿದರು.
ಮತದಾನ ಮುಕ್ತಾಯಗೊಳ್ಳುವ 48 ಗಂಟೆ ಮುಂಚಿನ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಪ್ರಚಾರಕ್ಕಾಗಿ
ಬಳಸುವಂತಿಲ್ಲ. ಆಯೋಗದ ನಿರ್ದೇಶನವನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ನಿರ್ದೇಶನಗಳ ಪಾಲನೆಯಲ್ಲಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.