ಸುದ್ದಿಮೂಲ ವಾರ್ತೆ
ತುಮಕೂರು, ಏ.8: ಜಿಲ್ಲೆಯಲ್ಲಿ ಮೇ 10ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಈವರೆಗೂ ಶೌಚಾಲಯ, ರ್ಯಾಂಪ್, ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ಇರುವ ಅಧಿಕಾರಿಗಳನ್ನು ಅಮಾನತ್ತು ಮಾಡಲು ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.
ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮತಗಟ್ಟೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದದಿದ್ದಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಅಮಾನತ್ತು ಮಾಡಲು ಕ್ರಮವಹಿಸಲಾಗುವುದೆಂದು ಸೂಚನೆ ನೀಡಿದರು.
ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ಮೂಲ ಸೌಕರ್ಯಗಳು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈವರೆಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಇದ್ದಲ್ಲಿ ಕೂಡಲೇ ಕ್ರಮಕೈಗೊಂಡು ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.
ಕಳೆದ 2018ರ ವಿಧಾನ ಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ ಮತದಾನ ಪ್ರಮಾಣವನ್ನು ಅವಲೋಕಿಸಿದಾಗ ನಗರ ಪ್ರದೇಶಗಳ ಕೆಲವು ಮತಗಟ್ಟೆಗಳಲ್ಲಿ ಶೇ. 70ಕ್ಕಿಂತ
ಕಡಿಮೆ ಮತದಾನವಾಗಿದೆ. ಈ ನಿಟ್ಟಿನಲ್ಲಿ ಮೇ 10ರಂದು ನಡೆಯಲಿರುವ ಚುನಾವಣೆಯ ಮತದಾನ ಪ್ರಮಾಣ ಶೇ.100ರಷ್ಟಾಗುವಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದು ತಿಳಿಸಿದರು.
ಹಿಂದಿನ ಚುನಾವಣೆಗಳಲ್ಲಿ ನಗರ ಪ್ರದೇಶದಲ್ಲಿಯೇ ಮತದಾನ ಪ್ರಮಾಣ ಕಡಿಮೆಯಾಗಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಸರ ಅಭಿಯಂತರರು, ಕಂದಾಯಾಧಿಕಾರಿ, ಕಂದಾಯ ನಿರೀಕ್ಷಕರು, ಕರ ವಸೂಲಿದಾರರು, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಗಳನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.
ನಗರಗಳಲ್ಲಿರುವ ಕೊಳಚೆ ಪ್ರದೇಶ ವಾಸಿಗಳು ಮತದಾನದಿಂದ ವಂಚಿತರಾಗದಂತೆ ಅರಿವು ಮೂಡಿಸಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಎಲ್ಲಾ ಮತದಾರರಿಗೂ ಮತಗಟ್ಟೆ ಸಂಖ್ಯೆ ಹಾಗೂ ಕ್ರಮಸಂಖ್ಯೆ ಹೊಂದಿರುವ ವೋಟರ್ ಸ್ಲಿಪ್(ಮತದಾರರ ಚೀಟಿ) ಅನ್ನು ಮನೆ-ಮನೆಗೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.90ರಷ್ಟು, ನಗರ ಪ್ರದೇಶಗಳಲ್ಲಿ ಶೇ.70ರಷ್ಟು ಮತದಾನವಾಗಿದ್ದು, ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸ್ವೀಪ್ ಚಟುವಟಿಕೆಗಳನ್ನು
ಏರ್ಪಡಿಸಬೇಕು. ಬೀದಿನಾಟಕ, ವಿವಿಧ ಸ್ಪರ್ಧೆ, ಸಹಿ ಅಭಿಯಾನ, ಪೋಸ್ಟ್ಕಾರ್ಡ್ ಅಭಿಯಾನ, ಕ್ಯಾಂಡಲ್ ಲೈಟ್ ಸೇರಿದಂತೆ ವಿವಿಧ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. “ನಾನು ಮತದಾನ
ಮಾಡುತ್ತೇನೆ. ನೀವು ಮತದಾನ ಮಾಡಿ” ಎಂಬ ಘೋಷ ವಾಕ್ಯದ ಮೂಲಕ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಮಧುಗಿರಿ ಉಪವಿಭಾಗಾಧಿಕಾರಿ ರಿಷಿ ಆನಂದ್, ತುಮಕೂರು ಉಪವಿಭಾಗಾಧಿಕಾರಿ ಹೆಚ್.ಶಿವಪ್ಪ, ತಹಶೀಲ್ದಾರ್ ಸಿದ್ದೇಶ್,
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.