ಸುದ್ದಿಮೂಲ ವಾರ್ತೆ
ತುಮಕೂರು, ಏ.21: ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ ತಪ್ಪದೆ ಎಲ್ಲಾ ಮತದಾರರು ಮತದಾನ ಮಾಡಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಡಿ.ಜೈಪಾಲ್ ಮನವಿ ಮಾಡಿದರು.
ತುಮಕೂರು ತಾಲ್ಲೂಕು ಪಂಚಾಯತಿ ವತಿಯಿಂದ ಬೆಳ್ಳಾವಿ ಗ್ರಾಮ ಪಂಚಾಯತಿಯಲ್ಲಿಎಂದು ಕಡ್ಡಾಯ ಮತದಾನ ಹಾಗೂ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ನಡಿಗೆ ಹಾಗೂ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮಹಿಳೆಯರು, ವೃದ್ಧರನ್ನು ಭೇಟಿ ಮಾಡಿ ಮತದಾನ, ಮತದಾನದ ಮಹತ್ವ ಕುರಿತು ಅರಿವು ಮೂಡಿಸಿದರು.
ಮತದಾನ ಮಾಡುವ ಮೂಲಕ ಮುಂದಿನ ತಲೆಮಾರಿನವರಿಗೆ ನಾವು ಮಾದರಿಯಾಗಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಪ್ರಜಾ ಪ್ರಭುತ್ವಕ್ಕೆ ಭದ್ರ ಬುನಾದಿಯಾಗಬೇಕೆಂದು ಮತದಾರರಿಗೆ ಜಾಗೃತಿ ಮೂಡಿಸಿದರು.
ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೆಶಕ (ಗ್ರಾ ಉ) ಮಂಜುನಾಥ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಭಾರತ ಸಂವಿಧಾನದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ಅಲ್ಲದೆ, ಜಾತಿ- ಧರ್ಮ, ಬಡವ-ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನತೆಯಿಂದ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳಲು ಎಲ್ಲರ ಸಹಕಾರ ಅತ್ಯಗತ್ಯ ಎಂದರಲ್ಲದೆ, ವಯೋವೃದ್ಧರು, ವಿಕಲಚೇತನ ಮತದಾರರಿಗೆ
ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಚುಣಾವಣಾ ಆಯೋಗವು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಶೇ.100ರಷ್ಟು ಮತದಾನ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು, ಮತದಾನ ಜಾಗೃತಿ ಕಾರ್ಯಕ್ರಮ ಎಂಬ ಬರಹವುಳ್ಳ ಪೂರ್ಣಕುಂಭ ಕಳಶಗಳನ್ನು ಹೊತ್ತು ಬೀದಿಗಳಲ್ಲಿ ಸಾಗುತ್ತಾ ಆಮಿಶಗಳಿಗೆ ಒಳಗಾಗದೆ ಮತ ಚಲಾಯಿಸಿ, ಮತವನ್ನು ಮಾರಿಕೊಳ್ಳ ಬೇಡಿ, ನಿಮ್ಮ ಮತ ಅಮೂಲ್ಯವಾದದ್ದು, ತಪ್ಪದೇ ಮತದಾನ ಮಾಡಿ ಎಂಬ ಘೋಷ ವಾಕ್ಯಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು.
ಬಳಿಕ ಗ್ರಾಮ ಪಂಚಾಯತಿ ಆವರಣದಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.