ಸುದ್ದಿಮೂಲವಾರ್ತೆ
ಕೊಪ್ಪಳ ಮೇ 25: ತುಂಗಭದ್ರಾ ಜಲಾಶಯ ಈ ಭಾರಿ ಬರಿದಾಗುತ್ತಿದೆ. ಮುಂಗಾರು ಮಳೆಯ ಅನಿಶ್ಚಿತತೆ ಮುಂದುವರಿದಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ 12 ಟಿಎಂಸಿ ನೀರು ಕೊರತೆ ಇದೆ. ಜಲಾಶಯದ ನೀರು ಬಳಕೆಯಾಗುವುದು ಕುಡಿವ ನೀರು. ರೈತರಿಗೆ ನೀರಾವರಿಗಾಗಿ ನೀಡುವುದು ಆದ್ಯತೆ. ಆದರೆ ಕಾರ್ಖಾನೆಗಳಿಗೆ ಬರಿದಾಗುತ್ತಿರುವಾಗ ನೀರು ನೀಡುತ್ತಿದ್ದಾರೆ.
ಕೊಪ್ಪಳ. ರಾಯಚೂರು. ವಿಜಯನಗರ ಹಾಗು ಬಳ್ಳಾರಿ ಜಿಲ್ಲೆಯ ಜನರಿಗೆ ಕುಡಿವ ನೀರಿನ ಕೊರತೆಯಾಗಲಿದೆ. ಬೃಹತ್ ಉಕ್ಕು ಕಾರ್ಖಾನೆಗಳಿಗೆ ನೀಡಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಈಗ ನೀರು ಖಾಲಿಯಾಗುತ್ತಿದೆ. 1633 ಅಡಿ ಎತ್ತರದವರೆಗೂ ನೀರು ನಿಲ್ಲುವ ಜಲಾಶಯದಲ್ಲಿ ಈಗ 1579 ಅಡಿ ನೀರಿದೆ. ಜಲಾಶಯದಲ್ಲಿ ಈಗ ಕೇವಲ ನಾಲ್ಕು ಅಡಿ ನೀರು ನಿಂತಿದೆ. ಒಟ್ಟು 100.894 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿ ಈಗ ಕೇವಲ 4 ಟಿಎಂಸಿ ನೀರು ಇದೆ. ಅದರಲ್ಲಿ 2 ಟಿಎಂಸಿ ಡೆಡ್ ಸ್ಟೋರೇಜ್ ಇದೆ. 2 ಟಿಎಂಸಿ ನೀರಿನಿಂದ ನಾಲ್ಕು ಜಿಲ್ಲೆಗಳಿಗೆ ಕುಡಿವ ನೀರು ನೀಡಬೇಕು.
ಈಗ ಬಿರು ಬಿಸಿಲು ಇದೆ. ಜಲಾಶಯದ ಕೆಳ ಭಾಗದಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಏದುರಾಗಿದೆ. ಮುಂಗಾರು ಪೂರ್ವ ಮಳೆಯಾಗಿಲ್ಲ. ಮುಂಗಾರು ಮಳೆಯು ಅನಿಶ್ಚಿತತೆಯಿಂದ ಕೂಡಿದೆ. ಇಂಥ ಸಂದರ್ಭದಲ್ಲಿ ಜಲಾಶಯದಿಂದ ಕಲ್ಯಾಣಿ ಹಾಗು ಕಿರ್ಲೋಸ್ಕರ್ ಸೇರಿದಂತೆ ಹಲವು ಕಾರ್ಖಾನೆಗಳಿಗೆ ನೀರು ನೀಡುತ್ತಿದ್ದಾರೆ. ಕಾರ್ಖಾನೆಯವರು ಬೃಹತ್ ಮೋಟಾರು ಅಳವಡಿಸಿ ತಳಮಟ್ಟದವರೆಗೂ ನೀರು ತೆಗೆದುಕೊಳ್ಳುತ್ತಿದ್ದಾರೆ. ತುಂಗಭದ್ರಾ ಜಲಾಶಯ ನೀರು ಕುಡಿವುದಕ್ಕೆ ಹಾಗು ನೀರಾವರಿ ಆದ್ಯತೆ ಇರುವಾಗ ಈಗ ಜಲಾಶಯದಿಂದ ಕಾರ್ಖಾನೆಗಳಿಗೆ ನೀರು ನೀಡುತ್ತಿರುವದಕ್ಕೆ ಜನತೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತುಂಗಭದ್ರಾ ನೀರಾವರಿ ವಲಯದ ಅಧಿಕ್ಷಕ ಇಂಜಿನಿಯರ್ ಬಸವರಾಜ ಜಲಾಶಯದಿಂದ 1575 ಅಡಿಯವರೆಗೂ ಕಾರ್ಖಾನೆಗಳಿಗೆ ನೀರು ನೀಡಲು ಅವಕಾಶವಿದೆ. ಈ ಮಧ್ಯೆ ಕಳೆದ ತಿಂಗಳು ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗೆ ನೀರು ನೀಡುವ ಉದ್ದೇಶದಿಂದ ಕಾರ್ಖಾನೆಗಳಿಗೆ ನೀರು ನೀಡಿರಲಿಲ್ಲ. ಆದರೆ ಈಗ ಕಾರ್ಖಾನೆಯವರು ಹಾಗು ಕಾರ್ಖಾನೆಯಿಂದ ಕೆಲವು ಗ್ರಾಮಗಳಿಗೆ ಕುಡಿವ ನೀರಿಗಾಗಿ ನೀರು ಕೇಳಿದ್ದರಿಂದ ಅಲ್ಪ ಪ್ರಮಾಣದಲ್ಲಿ ನೀರು ಬಿಡಲಾಗಿದೆ ಎಂದು ಸ್ಪಷ್ಠನೆ ನೀಡಿದ್ದಾರೆ.
ಮೊದಲು ಆದ್ಯತೆ ಬಿಟ್ಟು ಕಾರ್ಖಾನೆಗಳಿಗೆ ನೀರು ನೀಡಿದ್ದು ವ್ಯಾಪಕ ಟೀಕೆಗೆ ಒಳಗಾಗಿದೆ. ತಕ್ಷಣ ಕಾರ್ಖಾನೆಗೆ ನೀರು ನೀಡುವದನ್ನು ನಿಲ್ಲಿಸಬೇಕೆಂದು ಅಚ್ಚುಕಟ್ಟು ಪ್ರದೇಶ ರೈತರು ಆಗ್ರಹಿಸಿದ್ದಾರೆ.