ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.19: ಉದ್ಯಾನ್ ಎಕ್ಸ್ಪ್ರೆಸ್ ರೈಲಿನ ಹವಾನಿಯಂತ್ರಿತ ಎರಡು ಬೋಗಿಗಳಿಗೆ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಬೆಂಕಿತಗುಲಿದ ಪರಿಣಾಮ ಮೂರು ಬೋಗಿಗಳು ಸುಟ್ಟು ಕರಕಲಾಗಿವೆ.
ಮುಂಬೈನಿಂದ ಬೆಂಗಳೂರು ತಲುಪಿದ್ದ ಉದ್ಯಾನ್ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅದು ಬಿ1 ಮತ್ತು ಬಿ2 ಬೋಗಿಗಳಿಗೂ ವ್ಯಾಪಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಹರಡಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಮಾಡಿತ್ತು. ಕೂಡಲೇ ಅಗ್ನಿಶಾಮಕ ದಳ ಬೆಂಕಿ ನಂದಿಸಿತು. ದಟ್ಟ ಹೊಗೆ ರೈಲು ನಿಲ್ದಾಣ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತ ಹರಡಿತ್ತು.
ಬೆಳಗ್ಗೆ 5.45ರ ಸುಮಾರಿಗೆ ಉದ್ಯಾನ್ ಎಕ್ಸ್ಪ್ರೆಸ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಪ್ಲಾಟ್ಫಾರಂಗೆ ಬಂದು ತಲುಪಿತ್ತು. ಕೆಲಹೊತ್ತಿನಲ್ಲಿ ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದಿದ್ದರು. ಬೆಳಗ್ಗೆ 7.10ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದ್ದಕ್ಕಿದ್ದಂತೆ ಎರಡು ಬೋಗಿಗಳಿಗೆ ವ್ಯಾಪಿಸಿದೆ. ಎಲ್ಲಾ ಆಸನಗಳು, ಮತ್ತು ಪ್ರಯಾಣಿಕರಿಗೆ ನೀಡಲಾಗಿದ್ದ ಬೆಡ್ಶೀಟ್ ಸಹಿತ ರೈಲಿನ ಬೋಗಿಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಕೂಡಲೇ ಹಿಂದೆ ಮತ್ತು ಮುಂದೆ ಇದ್ದ ಬೋಗಿಗಳನ್ನು ಬೇರ್ಪಡಿಸಲಾಗಿದೆ. 7.35ರ ಸುಮಾರಿಗೆ ಅಗ್ನಿಶಾಮಕ ವಾಹನಗಳು ಬಂದು ಬಳಿಕ ಬೆಂಕಿ ನಂದಿಸಿವೆ.
“ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ಅಲ್ಲದೆ, ಇದರಿಂದ ಇತರೆ ರೈಲುಗಳ ಪ್ರಯಾಣದಲ್ಲಿಯೂ ಯಾವದೇ ವ್ಯತ್ಯಾಸವಾಗಿಲ್ಲ. ಘಟನೆಗೆ ಕಾರಣ ಏನು ಎಂಬುದನ್ನು ತನಿಖೆಗೆ ವಹಿಸಲಾಗಿದೆ,’ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಹೇಳಿದ್ದಾರೆ.