ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 29 : ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಯುವತಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯ ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ ನಡೆದಿದೆ. ವೀಣಾ ಬಿಎಂಟಿಸಿ ಬಸ್ಗೆ ಬಲಿಯಾದ ಮಹಿಳೆ.
ವೀಣಾ ಅವರು ರಸ್ತೆ ದಾಟುವಾಗ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೀಣಾ ಗಾರ್ಮೆಂಟ್ಸ್ನಲ್ಲಿ ಟೈಲರಿಂಗ್ ಕೆಲಸ ಮಾಡಿ ತಿಂಗಳಿಗೆ 9ಸಾವಿರ ರೂ. ದುಡಿಯುತ್ತಿದ್ದಾಕೆ. ಮನೆಯಲ್ಲಿರುವ ತಂದೆ, ತಾಯಿಗೆ ವೀಣಾ ಒಬ್ಬಳೇ ಆಧಾರಸ್ತಂಭ. ವೀಣಾ ದುಡಿಮೆ ಮೇಲೆ ಇಡೀ ಕುಟುಂಬ ಅವಲಂಬಿತವಾಗಿದೆ. ವೀಣಾಗೆ ಅಣ್ಣ-ತಮ್ಮಂದಿರು ಇಬ್ಬರು ಇದ್ದಾರೆ. ಅವರೂ ಸಹ ಅಂಗವಿಕಲರು. ತಂದೆಗೆ ಕಣ್ಣು ಕಾಣೋದಿಲ್ಲ.
ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯತನ ಹಾಗು ಅತಿ ವೇಗದ ಚಾಲನೆ ಮಾಡಿದ ಚಾಲಕ ಲೂರ್ದು ಸ್ವಾಮಿ ಎಂಬಾತನನ್ನ ಹುಳಿಮಾವು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತ್ನಿ ಸೀಮಂತಕ್ಕೆ ಹೂವು ತರಲು ಹೋದವನ ಸಾವು
ಮತ್ತೊಂದೆಡೆ , ಪತ್ನಿ ಸೀಮಂತಕ್ಕೆಂದು ಹೂ ಖರೀದಿ ಮಾಡಿ ಮನೆಗೆ ತೆರಳುತ್ತಿದ್ದಾಗ ಯಮ ಸ್ವರೂಪಿಯಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ವಿಜಯನಗರ ವಾಟರ್ ಟ್ಯಾಂಕ್ ಬಳಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರದ ನಿವಾಸಿ ಕುಮಾರ್ ಮೃತ ದುರ್ದೈವಿ. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಪತ್ನಿಯ ಸೀಮಂತ ಇದ್ದ ಕಾರಣ ಹೂ ತರಲು ಬಂದಿದ್ದರು. ಈ ವೇಳೆ ಬಿಎಂಟಿಸಿ ಬಸ್ ಓವರ್ ಟೇಕ್ ಮಾಡುವಾಗ ಕುಮಾರ್ ಇದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು ತೀವ್ರ ರಕ್ತಸ್ರಾವವಾಗಿದೆ.
ಕೂಡಲೇ ಸ್ಥಳೀಯರು ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.