ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಜು.26: ಆರೋಗ್ಯಕರವಾಗಿರಲು ಮತ್ತು ಸದೃಢತೆಯನ್ನು ಹೊಂದಲು ಪ್ರತಿಯೊಬ್ಬರು ಸಿರಿಧಾನ್ಯ ಆಹಾರ ಪದಾರ್ಥಗಳ ಬಳಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂ.ಗ್ರಾ.ಜಿಲ್ಲಾ ನಿರ್ದೇಶಕ ಉಮರ್ಹಬ್ಬ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾ.ಪಂಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಆಕಾಶ್ ಆಸ್ಪತ್ರೆ ಸಹಯೋಗದಲ್ಲಿ ಸ್ವ-ಸಹಾಯ ಸದಸ್ಯರುಗಳಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರಾದ ಶಿವಕುಮಾರಸ್ವಾಮೀಜಿ, ಜ್ಞಾನಯೋಗಿ ಸ್ವಾಮಿಜಿಗಳು ಸೇರಿದಂತೆ ಹಲವಾರು 100 ವರ್ಷಕ್ಕೂ ಮೇಲ್ಪಟ್ಟು ಬದುಕಿ ಆದರ್ಶರಾಗಿದ್ದಾರೆಂದರೆ, ಅವರ ಆಹಾರ ಪದ್ಧತಿ ಮತ್ತು ಅವರು ಸೇವಿಸುತ್ತಿದ್ದ ಸಿರಿಧಾನ್ಯಗಳೇ ಕಾರಣವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ 40-50 ವರ್ಷ ಜೀವಿತಾವಧಿಗೆ ಮರೆಯಾಗುತ್ತಿದ್ದಾರೆ. ಹೀಗಾಗಿ, ಹಿಂದಿನ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರಹಳ್ಳಿ ಗ್ರಾಪಂ ಅಧ್ಯಕ್ಷ ರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆರೋಗ್ಯ ತಪಾಸಣೆ ಮಾಡುತ್ತಿರುವುದು ಹೆಚ್ಚು ಸಹಕಾರಿಯಾಗಿದೆ. ರಕ್ತಪರೀಕ್ಷೆ, ಬಿಪಿ, ಇಸಿಜಿ, ಪ್ರತ್ಯೇಕವಾಗಿ ಮಹಿಳೆಯರ ಹಲವಾರು ಆರೋಗ್ಯ ಗುಪ್ತ ಸಮಸ್ಯೆಗಳ ಪರಿಹಾರ ಸೇರಿದಂತೆ ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಇಂತಹ ಶಿಬಿರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರಹಳ್ಳಿ ವಲಯ ವ್ಯಾಪ್ತಿಯಲ್ಲಿ 350 ಕ್ಕೂ ಹೆಚ್ಚು ಸ್ವಸಹಾಯ ಮಹಿಳಾ ಸದಸ್ಯರು ಇರುತ್ತಾರೆ. ಸುಮಾರು 150 ಕ್ಕೂ ಹೆಚ್ಚು ಮಹಿಳೆಯರು ಶಿಬಿರದ ಸದುಪಯೋಗ ಪಡಿಸಿಕೊಂಡಿದ್ದಾರೆ.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಎನ್.ರವಿ, ಹಾಲಿ ಸದಸ್ಯ ಕೆಂಪಣ್ಣ, ಆಕಾಶ್ ಆಸ್ಪತ್ರೆ ವೈದ್ಯರಾದ ಡಾ.ಸಿರಿ, ಕಿರಣ್, ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಸಂದ್ಯಶೆಟ್ಟಿ, ದೇವನಹಳ್ಳಿ ತಾಲೂಕಿನ ಯೋಜನಾಧಿಕಾರಿ ರವಿರಾಜ್ನಾಯಕ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮೀ, ವಲಯ ಮೇಲ್ವೀಚಾರಕಿ ಶಾರದ, ಸೇವಾ ಪ್ರತಿನಿಧಿ ಮಾಲ, ಗ್ರಾಪಂ ಕಾರ್ಯದರ್ಶಿ ಯಶೋಧ್ಕುಮಾರ್, ಬಿಲ್ಕಲೆಕ್ಟರ್ ರವಿ, ಸ್ವಸಹಾಯ ಸಂಘದ ಮಹಿಳೆಯರು ಇದ್ದರು.