ತುಮಕೂರು,ಏ.11: ಮೂಲ ಕಾರ್ಯಸ್ಥಾನದಲ್ಲಿಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಅನಧಿಕೃತವಾಗಿ ಗೈರು ಹಾಜರಾಗಿರುವುದಲ್ಲದೆ ಜಿಲ್ಲಾಧಿಕಾರಿಗಳ ಕಾರಣ ಕೇಳಿ ನೋಟೀಸಿಗೂ ಸಮಜಾಯಿಷಿ ನೀಡದೆ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಗುಬ್ಬಿ ತಾಲ್ಲೂಕು ಹಿಂಡಿಸಿಗೆರೆ ಗ್ರಾಮಪಂಚಾಯತಿ ಗ್ರೇಡ್-1 ಕಾರ್ಯದರ್ಶಿ ಎನ್.ವಿ. ತಿಮ್ಮರಾಜು ಅವರನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅವರು ಅಮಾನತ್ತುಗೊಳಿಸಿ ಇಂದು ಆದೇಶ ಹೊರಡಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಲೋಕಸಭಾ,ವಿಧಾನಸಭಾ, ವಿಧಾನಪರಿಷತ್ ಸದಸ್ಯರ ಕಚೇರಿಗಳಲ್ಲಿ
ನಿಯೋಜನೆ ಅನ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಹಿಂಪಡೆದು ಪ್ರಸಕ್ತ ನಿರ್ವಹಿಸುತ್ತಿರುವ ಕರ್ತವ್ಯದಿಂದ ಬಿಡುಗಡೆ ಮಾಡಿ ಅವರ ಸೇವೆಯನ್ನು ಮಾತೃ
ಇಲಾಖೆಗೆ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಆದೇಶದನ್ವಯ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ತಿಮ್ಮರಾಜು ಅವರ ಸೇವೆಯನ್ನು ಮೂಲ ಕಾರ್ಯಸ್ಥಾನವಾದ
ಹಿಂಡಿಸಿಗೆರೆ ಗ್ರಾಮಪಂಚಾಯತಿ ಗ್ರೇಡ್-1 ಕಾರ್ಯದರ್ಶಿ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಾಗಿದ್ದು, ಈವರೆಗೂ ತಿಮ್ಮರಾಜು ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದಿಲ್ಲ.
ಕರ್ತವ್ಯಕ್ಕೆ ವರದಿ ಮಾಡಿಕೊಂಡಿರದಿರುವ ಬಗ್ಗೆ ಜಿಲ್ಲಾಧಿಕಾರಿಗಳು ಜಾರಿ ಮಾಡಿದ ಕಾರಣ ಕೇಳಿ ನೋಟೀಸಿಗೂ ಸಮಜಾಯಿಷಿ ನೀಡದೆ ತಿಮ್ಮರಾಜು ಅವರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಜರುಗಿಸಲು ತೀರ್ಮಾನಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ತಿಮ್ಮರಾಜು ಅವರ ಮೇಲಿನ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇರಿಸಿ, ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ನೌಕರರಿಗೆ ಕೆಸಿಎಸ್ಆರ್ 1958ರ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಾವತಿಸಲಾಗುವುದು. ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಸೂಚಿಸಿದ್ದಾರೆ.