ಸುದ್ದಿಮೂಲ ವಾರ್ತೆ
ಬೆಂಗಳೂರು,ನ.30: ಅನ್ ಬಾಕ್ಸಿಂಗ್ ಬಿಎಲ್ಆರ್ ಪೌಂಡೇಷನ್ ವತಿಯಿಂದ ಡಿ.1 ರಿಂದ 11ರವರೆಗೆ ನಗರದಾದ್ಯಂತ ‘ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬ’ ಆಚರಿಸಲಾಗುತ್ತಿದೆ.
ಬೆಂಗಳೂರು ಹಬ್ಬದ ಅಂಗವಾಗಿ ಚಿಕ್ಕಪೇಟೆಯಲ್ಲಿ ನಡೆದ ಕೆಂಪೇಗೌಡರ ಎತ್ತಿನ ಬಂಡಿ ಮೆರವಣಿಗೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದು ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಪ್ರಶಾಂತ್ ಪ್ರಕಾಶ್ ಹಾಗೂ ಅವರ ಸ್ನೇಹಿತರು ತಮ್ಮ ದುಡ್ಡಿನಲ್ಲಿ ನಮ್ಮ ಮನೆಯ ಹಬ್ಬವನ್ನು ಆಚರಿಸುತ್ತಿದ್ದಾರೆ. ಬೆಂಗಳೂರಿನ 1.40 ಕೋಟಿ ಜನರು ಈ ಹಬ್ಬದಲ್ಲಿ ಪಾಲ್ಗೊಂಡು ಸಂತೋಷ ಪಡಬೇಕು ಎಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದರು ಹೇಳಿದರು.
ನಾಡಪ್ರಭು ಕೆಂಪೇಗೌಡರು ಇದೇ ಜಾಗದಿಂದ ಎಲ್ಲ ವೃತ್ತಿ, ಎಲ್ಲಾ ಜನಾಂಗ, ಎಲ್ಲಾ ಧರ್ಮವನ್ನು ಒಟ್ಟಿಗೆ ಸೇರಿಸಿ ಬೆಂಗಳೂರು ನಗರ ಕಟ್ಟಿದರು. ಬೆಂಗಳೂರು ವಿಶ್ವಕ್ಕೆ ದೊಡ್ಡ ಮಾದರಿಯಾಗಿದೆ. ಪ್ರಪಂಚದ ಎಲ್ಲ ಜನ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ಇದಕ್ಕೆ ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯ ಕಾರಣ. ಇದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಎಲ್ಲಾ ವರ್ಗದ ಜನ ಸುಭಿಕ್ಷವಾಗಿ ಇರಬೇಕು ಎಂಬುದು ನಮ್ಮ ಆಸೆ ಎಂದರು.
ಈ ಬೆಂಗಳೂರು ಹಬ್ಬವನ್ನು 11 ದಿನಗಳ ಕಾಲ ಆಚರಿಸಲು ರೂಪಿಸಲಾಗಿದೆ. ಈ ವರ್ಷ ಅವರು ಅವರದೇ ಆದ ರೀತಿಯಲ್ಲಿ ಈ ಹಬ್ಬ ಆಚರಿಸುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಬಿಬಿಎಂಪಿ, ಮೆಟ್ರೋ ಸೇರಿದಂತೆ ಎಲ್ಲಾ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಎಲ್ಲಾ ಸಂಘಟನೆ ವ್ಯಾಪಾರಿಗಳು ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು ಎಂದು ಮನವಿ ಮಾಡುತ್ತೇನೆ.
ಮುಂದೆ ಪ್ರತಿ ವಾರ್ಡ್, ವಿಧಾನಸಭಾ ಕ್ಷೇತ್ರದಲ್ಲಿ ಈ ಹಬ್ಬವನ್ನು ಆಯೋಜಿಸಿ ಆಯಾ ಭಾಗದ ಜನ ಅಲ್ಲೇ ಈ ಹಬ್ಬವನ್ನು ಆನಂದಿಸುವಂತೆ ಮಾಡಲಾಗುವುದು. ಎಲ್ಲರೂ ತಮ್ಮ ಮನೆಗಳಲ್ಲೂ ಈ ಹಬ್ಬದ ರೀತಿ ಅಲಂಕಾರ ಮಾಡಿ ಸುಂದರ ವಾತಾವರಣ ಮೂಡಿಸಬೇಕು. ಆ ಮೂಲಕ ನಮ್ಮ ಇತಿಹಾಸ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಆರ್. ಸ್ನೇಹಲ್, ವಿನೋತ್ ಪ್ರಿಯಾ, ಅನ್ ಬಾಕ್ಸಿಂಗ್ ನಿರ್ದೇಶಕರಾದ ಪ್ರಶಂತಾ ಪ್ರಕಾಶ್, ಅನ್ ಬಾಕ್ಸಿಂಗ್ ಬಿಎಲ್ಆರ್ ಹಬ್ಬದ ನಿರ್ದೇಶಕರಾದ ರವಿಚಂದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.