ಸುದ್ದಿಮೂಲ ವಾರ್ತೆ
ಮಂಡ್ಯ ಸೆ.29:ಕರ್ನಾಟಕ ಬಂದ್ಗೆ ಮಂಡ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜಿಲ್ಲಾ ಕೇಂದ್ರ ಮಂಡ್ಯ ನಗರದಲ್ಲಿ ಸ್ವಯಂ ಪ್ರೇರಿತರಾಗಿ ಬಂದ್ ಬೆಂಬಲಿಸಿದ್ದು, ತುರ್ತು ಸೇವೆ ಹೊರತುಪಡಿಸಿ ಇನ್ನೆಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು.
ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚುವ ಮೂಲಕ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಮಾಲ್, ಹೋಟೆಲ್, ಸಣ್ಣಪುಟ್ಟ ಅಂಗಡಿಗಳು ಸಹ ಬಾಗಿಲು ಮುಚ್ಚಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಸರಕು ಸಾಗಾಣಿಕೆ ವಾಹನಗಳು ಸಹ ಸಂಚಾರ ಸ್ಥಗಿತ ಮಾಡಿದ್ದವು. ಆಟೋ ಸಂಚಾರ ವಿರಳವಾಗಿತ್ತು. ರೈಲು ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗದ ಹಿನ್ನಲೆಯಲ್ಲಿ ಎಂದಿನಂತೆ ರೈಲುಗಳು ಸಂಚಾರ ಮಾಡಿದವು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು. ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚಲನಚಿತ್ರ ಮಂದಿರಗಳಲ್ಲಿ ದಿನದ ನಾಲ್ಕು ಚಿತ್ರ ಪ್ರದರ್ಶನ ರದ್ದಾಗಿತ್ತು. ಕೆಲವೆಡೆ ಪೆಟ್ರೋಲ್ ಬಂಕ್ ಗಳು ಗ್ರಾಹಕರಿಗೆ ಪೆಟ್ರೋಲ್ ಒದಗಿಸಿದವು. ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಸಂಪೂರ್ಣ ಬಿಕೋ ಎನ್ನುತಿತ್ತು. ನಗರದ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ನಟರು
ಬಂದ್ ಬೆಂಬಲಿಸಿ ಚಿತ್ರನಟ ದರ್ಶನ್ ಅಭಿಮಾನಿಗಳು, ರಾಜಸ್ಥಾನ ಸಮಾಜ, ಮಂಗಳಮುಖಿಯರು,ಎಸ್ ಡಿ ಪಿ ಐ ಹಾಗೂ ವಿಶ್ವಕರ್ಮ ಸಮಾಜದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದರು .ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ದರ್ಶನ್ ಸೇನಾ ಸಮಿತಿ ಆಶ್ರಯದಲ್ಲಿ ಮೆರವಣಿಗೆ ಹೊರಟ ದರ್ಶನ್ ತೂಗುದೀಪ್ ಅಭಿಮಾನಿಗಳು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ನಾವು ಎಂದೆಂದಿಗೂ ರೈತಪರ ಎಂದರು.
ಸ್ಟಾಲಿನ್ ಭಾವಚಿತ್ರಕ್ಕೆ ರಕ್ತ
ಮಂಡ್ಯದಲ್ಲಿ ಕಸ್ತೂರಿ ಜನಪರ ವೇದಿಕೆ ಕಾರ್ಯಕರ್ತರು ಕೈ ಕೊಯ್ದುಕೊಂಡು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರದ ಮೇಲೆ ಹರಿಸಿದರು. ಜನಪರ ವೇದಿಕೆ ಮುಖಂಡನೊಬ್ಬ ಅಂಗೈ ಕೊಯ್ದು ಕೊಂಡು ರಕ್ತ ಚಿಮ್ಮಿಸಿ ಕಾವೇರಿ ನಮ್ಮದು ರಕ್ತ ಕೊಟ್ಟರೂ ನೀರು ಬಿಡೆವು ಎಂದರು. ‘ರಕ್ತ ಬಿಜಾಸುರ ಸ್ಟಾಲಿನ್ಗೆ ರಕ್ತ ಕೊಡುತ್ತೇವೆ, ನೀರು ಕೊಡುವುದಿಲ್ಲ’ ಎಂದು ಘೋಷಣೆ ಕೂಗಿದರು.
ಕೆಆರ್ಎಸ್ ಗೆ ಮುತ್ತಿಗೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ ಆರ್ ಎಸ್ ಅಣೆಕಟ್ಟು ಮುಂದೆ ವಿವಿಧ ಸಂಘಟನೆಗಳು ಧರಣಿ ನಡೆಸಿದರು. ನಂತರ ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ವಿವಿಧ ಸಂಘಟನೆಗಳು, ಧರ್ಮ ಬಾಂಧವರು ಹಾಗೂ ಚಂದ್ರಮನ ಆಶ್ರಮದ ಮಹಾಸ್ವಾಮಿಗಳು ಮೆರವಣಿಗೆ ಮಾಡಿ ತಾಲೂಕು ಕಚೇರಿ ಮುಂದೆ ಧರಣಿ ಕುಳಿತರು.