ಸುದ್ದಿಮೂಲ ವಾರ್ತೆ
ಮಂಡ್ಯ, ಸೆ.23: ಕಾವೇರಿಗೆ ನ್ಯಾಯ ಸಿಗದ ಕಾರಣ ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಮಂಡ್ಯ ಬಂದ್ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ನಡೆಯಿತು. ರೈತರು ಮಾತ್ರವೇ ಅಲ್ಲ. ಮಕ್ಕಳು, ಮಹಿಳೆಯರು ಕೂಡ ಬೀದಿಗಿಳಿದು ಆಕ್ರೋಶ ವ್ಯಪಡಿಸಿದರಲ್ಲದೆ, ಎಲ್ಲೆಡೆ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು.
ಬಂದ್ ಹಿನ್ನೆಲೆಯಲ್ಲಿಯಲ್ಲಿ ವಾಹನಗಳ ಸಂಚಾರ ಸ್ತಭ್ದವಾಗಿತ್ತು. ರಸ್ತೆ ಮೇಲೆ ಹೊರಳಾಡಿ ಪ್ರತಿಭಟನೆ ಮತ್ತು ಬರಗಾಲದ ಸಿಎಂ ಬಂದ್ರೆ ಬರಗಾಲನೇ ಬರೋದು, ರೈತ್ರ ಬಾಯಿಗೆ ಮಣ್ಣೇ ಎನ್ನುತ್ತಾ ಮಣ್ಣು ತಿಂದು ಖಂಡಿಸಲಾಯಿತು.
ಮಂಡ್ಯ ನಗರ ಮಾತ್ರವಲ್ಲದೆ ಮದ್ದೂರು ನಗರವನ್ನು ಕೂಡ ಬಂದ್ ಮಾಡಲಾಗಿತ್ತು. ಉಳಿದಂತೆ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕುಗಳಲ್ಲಿ ಬೆಂಬಲ ವ್ಯಕ್ತವಾಯಿತು. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.ವಾಹನ ಸಂಚಾರ ಕೂಡ ಸ್ಥಗಿತವಾಗಿತ್ತು. ಖಾಸಗಿ ಶಾಲಾ – ಕಾಲೇಜುಗಳು ಬಹುತೇಕ ಬಂದ್ ಆಗಿದ್ದವು, ವರ್ತಕರು ಸೇರಿ ಅನೇಕ ಸಂಘ ಸಂಸ್ಥೆಗಳು ಬೆಂಬಲ ಘೋಷಿಸಿದ್ದವು.
ಮಂಡ್ಯದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಹೋರಾಟ ಆರಂಭವಾಗಿದ್ದು, ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಉರುಳು ಸೇವೆ ನಡೆಯಿತು. ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್ ರ್ಯಾಲಿ ಕೂಡ ನಡೆಸಲಾಯಿತು. ಕಾವೇರಿ ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಕೂಡ ಸಾಥ್ ನೀಡಿದ್ದರು,
ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ಮಣ್ಣು ತಿಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ಅವರ ಭ್ರಷ್ಟ ಸರ್ಕಾರ ರೈತರ ಬಾಯಿಗೆ ಮಣ್ಣು ಹಾಕಿದೆ. ನಾವು ಹೆಂಡತಿಯ ತಾಳಿ ಅಡವಿಟ್ಟು ಬೋರ್ವೆಲ್ ಕೊರೆಸಿದ್ದೇವೆ. ಆದರೆ ನೀರು ಬಾರದೇ ಬೆಳೆಗಳು ಹಾಳಾಗುತ್ತಿವೆ. ಈ ಸರ್ಕಾರ ಇಡೀ ಮಂಡ್ಯ ಜಿಲ್ಲೆಯ ರೈತರು ಮಣ್ಣು ತಿನ್ನುವಂತೆ ಮಾಡಿದೆ. ಅದಕ್ಕಾಗಿ ನಾವೇ ಮಣ್ಣು ಹಾಕಿಕೊಳ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ರೈತರು ಕನ್ನಡಪರ ಹಾಗೂ ಪ್ರಗತಿ ಪರ ಸಂಘನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರೂ ಸಹ ಪ್ರತಿಭಟನೆಗೆ ಧುಮುಕಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕುಮಾರಸ್ವಾಮಿ ಭಾಗಿ:
ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಶಾಸಕ ಸಿಟಿ ರವಿ, ಮಂಡ್ಯದ ಜೆಡಿಎಸ್ ಮಾಜಿ ಶಾಸಕರು, ಕಾಂಗ್ರೆಸ್ನ ಕೆಲ ನಾಯಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ದಿಲ್ಲಿಯಿಂದ ನೇರವಾಗಿ ಆಗಮಿಸುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾದರು.
ಆದೇಶದ ಪ್ರತಿಗೆ ಬೆಂಕಿ
ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಟ್ಟು ರಸ್ತೆಯಲ್ಲಿ ಟೀ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಬೆಂಗಳೂರು – ಮೈಸೂರು ಹಳೇ ಹೆದ್ದಾರಿ ತಡೆದು ರಸ್ತೆಯಲ್ಲೇ ಮಲಗಿ, ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ಮೋಸ ಮಾಡಿ ನೀರು ಬಿಟ್ಟಿದ್ದಾರೆಂದು ಬಾಯಿ ಬಾಯಿ ಬಡಿದುಕೊಂಡು ಅಸಮಾಧಾನ ಹೊರಹಾಕಿದ ರೈತರು ಪ್ರಾಧಿಕಾರ, ಸುಪ್ರೀಂ ಕೋರ್ಟ್ ವಿರುದ್ಧ ಧಿಕ್ಕಾರ ಕೂಗಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದರು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಮತ್ತೊಂದು ತಂಡದಿಂದ ನಗರದ ಹಲವು ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಟಿ ಶ್ರೀಕಂಠೇಗೌಡ ನೇತೃತ್ವದಲ್ಲಿ ಸ್ವಯಂ ಪ್ರೇರಿತರಾಗಿ ಬಂದ್ಗೆ ಸಹಕರಿಸಲು ವರ್ತಕರಿಗೆ ಮನವಿ ಮಾಡಲಾಗಿತ್ತು.
ಖಾಲಿ ಕೊಡ ಹೊತ್ತು ಮಕ್ಕಳು:
ಜಿಲ್ಲೆಯ ಕ್ಯಾತುಂಗೆರೆ ಗ್ರಾಮದ ಮಹಿಳೆಯರು, ಮಕ್ಕಳೊಂದಿಗೆ ಖಾಲಿ ಕೂಡ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಸ್ಥಳಕ್ಕೆ ಆಗಮಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಭಾರಿ ಪೊಲೀಸ್ ಬಿಗಿ ಭದ್ರತೆ
ಅಹಿತಕರ ಘಟನೆ ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಎಸ್ಪಿ, ಎಎಸ್ಪಿ, ಮೂವರು ಡಿವೈಎಸ್ಪಿ, ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿ 400 ಕ್ಕೂ ಹೆಚ್ಚು ಪೊಲೀಸರು ಹಾಗೂ ಜೊತೆಗೆ 6 ಕೆ.ಎಸ್.ಆರ್.ಪಿ, 5 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು.