ಬೈರೂತ್, ಮಾ.25: ಅಮೆರಿಕವು ಸಿರಿಯಾದ ಕೆಲವೆಡೆ ಶುಕ್ರವಾರ ವೈಮಾನಿಕ ದಾಳಿ ನಡೆಸಿದೆ. ಇರಾನ್ ನಿರ್ಮಿತ ಡ್ರೋನ್ನಿಂದ ತನ್ನ ಪ್ರಜೆಯೊಬ್ಬರನ್ನು ಹತ್ಯೆ ಮಾಡಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ.
‘ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಜೊತೆ ಗುರುತಿಸಿಕೊಂಡಿರುವ ಸಂಘಟನೆಗಳನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ’ ಎಂದು ಅಮೆರಿಕದ ಸೇನಾ ಪಡೆಗಳು ಹೇಳಿವೆ.
ಗುರುವಾರ ನಡೆದಿದ್ದ ಡ್ರೋನ್ ದಾಳಿಯಲ್ಲಿ ನಮ್ಮ ಪ್ರಜೆಯೊಬ್ಬರ ಹತ್ಯೆ ಮಾಡಲಾಗಿತ್ತು. ಸೇನಾ ಪಡೆಯ ಐವರು ಗಾಯಗೊಂಡಿದ್ದರು. ದಾಳಿಗೆ ಬಳಸಲಾಗಿರುವ ಡ್ರೋನ್, ಇರಾನ್ ಮೂಲದ್ದು ಎಂದು ಗುಪ್ತಚರ ಇಲಾಖೆಯು ಮಾಹಿತಿ ಒದಗಿಸಿದೆ. ಇದು ಇನ್ನೂ ಖಾತರಿಯಾಗಿಲ್ಲ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಐಆರ್ಜಿಸಿ ಜೊತೆ ಗುರುತಿಸಿಕೊಂಡಿರುವ ಉಗ್ರಗಾಮಿ ಸಂಘಟನೆಗಳು ಸಿರಿಯಾದಲ್ಲಿನ ಸಮ್ಮಿಶ್ರ ಪಡೆಗಳನ್ನು ಗುರಿಯಾಗಿಸಿಕೊಂಡು ಗುರುವಾರ ಹಾಗೂ ಇತ್ತೀಚಿನ ದಿನಗಳಲ್ಲಿ ಹಲವು ದಾಳಿಗಳನ್ನು ನಡೆಸಿದ್ದವು. ಹೀಗಾಗಿ ನಮ್ಮ ಪಡೆಗಳು ಪ್ರತಿದಾಳಿ ಕೈಗೊಂಡಿವೆ’ ಎಂದು ಅವರು ಹೇಳಿದ್ದಾರೆ.
‘ಡ್ರೋನ್ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಸೈನಿಕರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಇತರ ಮೂವರು ಸೈನಿಕರು ಹಾಗೂ ನಾಗರಿಕರೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇರಾಕ್ಗೆ ಕರೆದೊಯ್ಯಲಾಗಿದೆ’ ಎಂದಿದ್ದಾರೆ.
‘ಅಮೆರಿಕ ನಡೆಸಿರುವ ವಾಯುದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇರಾಕ್ನ ಪ್ರಜೆಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ’ ಎಂದು ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದಾಳಿಯಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ, ಹಾನಿಯ ಪ್ರಮಾಣವೆಷ್ಟು ಎಂಬುದರ ಕುರಿತು ಇರಾನ್ ಮತ್ತು ಸಿರಿಯಾ ಅಧಿಕೃತ ಮಾಹಿತಿ ನೀಡಿಲ್ಲ.