ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.3: ಆಸ್ಟ್ರೇಲಿಯಾದ ಡಬ್ಲ್ಯೂಎ ಪಾರ್ಲಿಮೆಂಟ್ ಸ್ಪೀಕರ್ ಮಿಚೆಲ್ ರಾಬರ್ಟ್ ಅವರ ನಿಯೋಗ ಶನಿವಾರ ವಿಧಾನಸೌಧಕ್ಕೆ ಭೇಟಿ ನೀಡಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರೊಂದಿಗೆ ಚರ್ಚೆ ನಡೆಸಿತು.
ವಿಧಾನ ಸಭೆಯ ಸಭಾಂಗಣದಲ್ಲಿರುವ ಚಹಾ ಕೊಠಡಿಯಲ್ಲಿ ಸಭೆ ಸೇರಿ ಸದನದ ಕಾರ್ಯವೈಖರಿ, ನಡಾವಳಿಗಳು, ನಿಯಮಾವಳಿಗಳ ಕುರಿತು ಪರಸ್ಪರ ಚರ್ಚಿಸಿದರು. ಯು.ಟಿ.ಖಾದರ್ ಅವರು ರಾಜ್ಯ ಸದನದ ಕಾರ್ಯವೈಖರಿ, ನಡಾವಳಿಗಳನ್ನು ವಿಸ್ತೃತವಾಗಿ ವಿವರಿಸಿದರು.
ಈ ವೇಳೆ ಮಿಚೆಲ್ ರಾಬರ್ಟ್ ಅವರು ಅಲ್ಲಿನ ಸದನದ ಕಾರ್ಯವೈಖರಿ ನಡಾವಳಿ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಸಚಿವಾಲಯದ ಅಧಿಕಾರಿಗಳು ಹಾಗೂ ಪಾಶ್ಚಿಮಾತ್ಯ ಆಸ್ಟ್ರೇಲಿಯಾ ವಿಧಾನ ಸಭೆಯ ಅಧಿಕಾರಿಗಳು ಇದ್ದರು.