ಸುದ್ದಿಮೂಲ ವಾರ್ತೆ
ಏ.29: ಕಾಂಗ್ರೆಸ್ ಪಕ್ಷವು ನಿರಂತರವಾಗಿ ದೇಶಭಕ್ತರನ್ನು ಅವಮಾನಿಸುತ್ತಲೇ ಬಂದಿದೆ. ಈ ಅವಮಾನಿಸುವ ಸಂಸ್ಕøತಿಗೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಬೀದರ್ ಜಿಲ್ಲೆ ಹುಮ್ನಾಬಾದ್ ನಲ್ಲಿ ಇಂದು ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳ ಸಾಧನೆಯನ್ನು ಮತ್ತು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ವೈಫಲ್ಯವನ್ನು ಜನರ ಮುಂದಿಡಬೇಕು. ಇದು ಬಿಜೆಪಿ ಬಹುಮತದ ಸ್ಥಿರ ಸರ್ಕಾರವನ್ನು ರಚಿಸಲು ಮತ್ತು ಅಭಿವೃದ್ಧಿ ಪರ ಆಡಳಿತ ನೀಡಲು ನೆರವಾಗಲಿದೆ ಎಂದು ಆಶಿಸಿದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರೈತರ ಬಗ್ಗೆ ನಿಷ್ಕಾಳಜಿ ವಹಿಸಿದೆ. ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಡೆಗಣಿಸಲಾಗಿತ್ತು. ರೈತರ ಫಲಾನುಭವಿಗಳ ಪಟ್ಟಿಯನ್ನು ಸರಿಯಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಿರಲಿಲ್ಲವೆಂದು ಆಕ್ಷೇಪಿಸಿದರು. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದ ಕಾರಣ(ಡಿಬಿಟಿ) ಭ್ರಷ್ಟಾಚಾರಕ್ಕೆ ಅವಕಾಶವೇ ಇರಲಿಲ್ಲ. ಇದು ಸಮ್ಮಿಶ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿತ್ತು ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲಕ್ಷಾಂತರ ರೈತರ ಹೆಸರುಗಳನ್ನು ಕಿಸಾನ್ ಸಮ್ಮಾನ್ ನಿಧಿಗೆ ಶಿಫಾರಸು ಮಾಡಿತ್ತು.
ಇದರಿಂದ ಫಲಾನುಭವಿಗಳ ಸಂಖ್ಯೆ ಒಮ್ಮಿಂದೊಮ್ಮೆಲೆ ವೃದ್ಧಿಸಿತು. ಕೋಟಿಗಟ್ಟಲೆ ಮೊತ್ತ ನೇರವಾಗಿ ರೈತರ ಖಾತೆಗೆ ಜಮಾ ಆಯಿತು ಎಂದು ವಿವರಿಸಿದರು. ಇದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ನಡುವಿನ ಕಾರ್ಯವೈಖರಿಯ ಅಂತರ. ಇದನ್ನು ಜನತೆ ಗಮನಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ಬಿಜೆಪಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಪ್ರತಿ ಫಲಾನುಭವಿಗೆ 4 ಸಾವಿರ ರೂ. ನೀಡಿದ್ದನ್ನು ಅವರು ಉಲ್ಲೇಖಿಸಿದರು.
ರಾಜ್ಯದಲ್ಲಿ ಸುಮಾರು 9 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮನೆ-ಮನೆಗೆ ನಲ್ಲಿ ನೀರು ಸಂಪರ್ಕದಲ್ಲಿ, ಶೌಚಾಲಯಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಗಮನಾರ್ಹ ಮೊತ್ತವನ್ನು ನೀಡಲಾಗಿದೆ. ಕಾಂಗ್ರೆಸ್ ಪಕ್ಷವು ಹಿಂದೆ ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಂಡಿತ್ತು ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಜಾತಿ-ಮತ ಪಂಥ, ಭಾಷೆಯ ಆಧಾರದಲ್ಲಿ ವಿಭಜನೆಯ ನೀತಿಯನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಬಿಜೆಪಿ ಸಬ್-ಕ-ಸಾಥ್, ಸಭ್-ಕ-ವಿಶ್ವಾಸ್ ನೀತಿಯಡಿ ಕಾರ್ಯ ನಿರ್ವಹಿಸಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ಸರ್ಕಾರ ಇದ್ದಾಗ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಕೊಡುತ್ತಿದ್ದರೆ ಕೇವಲ ಟೀಕೆ ಆಧಾರದಲ್ಲಿ ಮತ ಕೇಳುವ ದೌರ್ಭಾಗ್ಯ ಸ್ಥಿತಿ ಇಂದು ಬರುತ್ತಿರಲಿಲ್ಲ. ದೇಶಕ್ಕಾಗಿ ಕೆಲಸ ಮಾಡುವವರು ಮತ್ತು ಸೇವೆ ಮಾಡುವವರನ್ನು ಅವಮಾನ ಮಾಡುವುದು ಕಾಂಗ್ರೆಸ್ಸಿನ ಜಾಯಮಾನ. ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೀರ ಸಾವರ್ಕರ್ ಸೇರಿದಂತೆ ದೇಶಪ್ರೇಮಿಗಳನ್ನು ಸದಾ ಅವಮಾನಿಸುತ್ತಲೇ ಬಂದಿದೆ. ಕೇವಲ ನನ್ನನ್ನು ಅವಮಾನಿಸಿದ್ದಲ್ಲ. ಈ ಅವಮಾನ ಮಾಡುವ ಸಂಸ್ಕøತಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ನುಡಿದರು.
ಸಮಾವೇಶದಲ್ಲಿ ಕೇಂದ್ರ ಸಚಿವ ಭಗವಂತ್ ಖುಬಾ, ಸ್ಥಳೀಯ ಮುಖಂಡರು, ಶಾಸಕರು, ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.