ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.23: ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯಡಿ (ಯುಯುಸಿಎಂಎಸ್) ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಗುರುವಾರ 4 ಹೊಸ ಮಾಡ್ಯೂಲ್ಗಳಿಗೆ ಚಾಲನೆ ನೀಡಿದರು. ಇದರೊಂದಿಗೆ, ಈ ವ್ಯವಸ್ಥೆಯಡಿ ರೂಪಿಸಿರುವ ಮಾಡ್ಯೂಲ್ಗಳ ಸಂಖ್ಯೆ ಏಳಕ್ಕೇರಿದಂತಾಗಿದೆ.
ವಿಕಾಸಸೌಧದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಹಣಕಾಸು ಯೋಜನೆ ಮತ್ತು ಉಸ್ತುವಾರಿ, ಮಾನ್ಯತೆ (ಅಫಿಲಿಯೇಷನ್), ಮಾನವ ಸಂಪನ್ಮೂಲ (ಎಚ್ಆರ್) ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡುವ ಸ್ಟೂಡೆಂಟ್ ಸಪೋರ್ಟ್ ಮಾಡ್ಯೂಲ್ಗಳಿಗೆ ಹಸಿರು ನಿಶಾನೆ ತೋರಿಸಿದರು. ಯುಯುಸಿಎಂಎಸ್ ಅಡಿಯಲ್ಲಿ ಒಟ್ಟು 10 ಮಾಡ್ಯೂಲ್ ತರುವ ಉದ್ದೇಶವಿದ್ದು, ಈಗಾಗಲೇ ಅಕಾಡೆಮಿಕ್, ಪ್ರವೇಶಾತಿ ಮತ್ತು ಪರೀಕ್ಷಾ ಮಾಡ್ಯೂಲ್ಗಳು ಅನುಷ್ಠಾನದಲ್ಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹಣಕಾಸು ಯೋಜನೆ ಮತ್ತು ಉಸ್ತುವಾರಿ ಮಾಡ್ಯೂಲ್ನಲ್ಲಿ ಎಲ್ಲಾ ಸರ್ಕಾರಿ ವಿ.ವಿ.ಗಳಲ್ಲಿ ಆಗುವ ಖರ್ಚುವೆಚ್ಚ ಮತ್ತು ಹರಿದು ಬರುವ ಆದಾಯಗಳ ಲೆಕ್ಕ ನಿಖರವಾಗಿ ಸಿಗಲಿದೆ. ಇದನ್ನು ಖರ್ಚುವೆಚ್ಚ ಮತ್ತು ಆದಾಯ ಮೂಲಗಳೊಂದಿಗೆ ಬೆಸೆಯಲಾಗಿದ್ದು, ಯಾವುದೇ ಅಕ್ರಮಕ್ಕೆ ಇಲ್ಲಿ ಆಸ್ಪದ ಇರುವುದಿಲ್ಲ ಎಂದರು.
ಮಾನ್ಯತೆಗೆ ಸಂಬಂಧಿಸಿದ ‘ಅಫಿಲಿಯೇಷನ್ ಮಾಡ್ಯೂಲ್’ ಮೂಲಕ ತಮ್ಮಲ್ಲಿರುವ ಶೈಕ್ಷಣಿಕ ಮತ್ತು ಇತರ ಸಂಪನ್ಮೂಲಗಳ ವಿವರಗಳನ್ನು ಆನ್ಲೈನ್ ಆಗಿ ನೋಂದಾಯಿಸಬಹುದು. ಜತೆಗೆ, ಮಾನ್ಯತಾ ಶುಲ್ಕವನ್ನು ಅವು ನೇರವಾಗಿ ವಿಶ್ವವಿದ್ಯಾಲಯಗಳುಗೆ ಪಾವತಿಸಬಹುದು. ಇದರ ಆಧಾರದ ಮೇಲೆ ಈ ತಂತ್ರಾಂಶವು ಆಯಾ ಕಾಲೇಜುಗಳಿಗೆ ಅಂಕಗಳನ್ನು ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಮಾನವ ಸಂಪನ್ಮೂಲ ಮಾಡ್ಯೂಲ್ನಲ್ಲಿ ಆಯಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿಗಳ ಮತ್ತು ಶೈಕ್ಷಣಿಕ ಅರ್ಹತೆಗಳ ವಿವರಗಳು ಬೆರಳತುದಿಯಲ್ಲಿ ಸಿಕ್ಕುತ್ತವೆ. ಇದು ಮುಂಬಡ್ತಿಯ ಸಮಯದಲ್ಲಿ ಅಗತ್ಯವಾದ ಎಪಿಐ (ಶೈಕ್ಷಣಿಕ ಸಾಧನೆ ಸೂಚ್ಯಂಕ) ಅನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು.
ಕೊನೆಯದಾಗಿ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಮತ್ತು ಶೈಕ್ಷಣಿಕ ಸಾಧನೆಗಳನ್ನು ಪರಿಷ್ಕರಿಸಲು ಹಾಗೂ ತಿಳಿದುಕೊಳ್ಳಲು ‘ಸ್ಟೂಡೆಂಟ್ ಸಪೋರ್ಟ್ ಮಾಡ್ಯೂಲ್’ ಅಭಿವೃದ್ಧಿ ಪಡಿಸಲಾಗಿದೆ. ವಿದ್ಯಾರ್ಥಿಗಳು ಹಾಸ್ಟೆಲ್ ಸೀಟು, ಸ್ಕಾಲರ್ಶಿಪ್, ಸಾಂಸ್ಕೃತಿಕ ಚಟುವಟಿಕೆಗಳು ಇತ್ಯಾದಿಗಳನ್ನು ಇದರ ಮೂಲಕವೇ ಪಡೆದುಕೊಳ್ಳಬಹುದು. ಹಾಗೆಯೇ, ಉದ್ಯೋಗಗಳಿಗೆ ಅರ್ಜಿ ಹಾಕುವ ಸಮಯದಲ್ಲೂ ಇದನ್ನು ಉಪಯೋಗಿಸಿಕೊಳ್ಳಬಹುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಟಿಯು ವಿವಿ ಡಾ.ವಿದ್ಯಾಶಂಕರ್, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪೊನ್ನುರಾಜ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಉಪ ಕಾರ್ಯದರ್ಶಿ ಸ್ನೇಹಲ್ ಲೋಖಂಡೆ, ಬಾಗೇವಾನ ಮುಂತಾದವರು ಉಪಸ್ಥಿತರಿದ್ದರು.