ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಮೇ 1: ಕಳೆದ ವರ್ಷದಿಂದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜನರ ಸೇವೆಗಾಗಿ ಸಾಕಷ್ಟು ಓಡಾಟ ಮಾಡಿದ್ದೆನೆ. ಇದರ ಪ್ರತಿಫಲವು ಸಹ ನನಗೆ ಸಿಕ್ಕಿದಂತಾಗಿದೆ ಕಾರಣ ಈ ಭಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ವೆಲ್ಫೇರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪ್ರಚಾರದ ಸಮಯದಲ್ಲಿ ಮಾತನಾಡಿದ ಅವರು, ನನ್ನ ಸೇವೆ ಗಮನಿಸಿದ ದೇವನಹಳ್ಳಿ ಜನತೆ ಪ್ರಚಾರದ ಸಮಯದಲ್ಲಿ ಬಹಳ ಸಹಕಾರ ನೀಡುತ್ತಿದ್ದಾರೆ. ಅದರಂತೆಯೇ ನಾನು ಗೆದ್ದರೆ ಹಣ ಸಂಪಾದನೆಗಿಂತ ಜನ ಸಂಪಾದಾನೆ ಮಾಡುವೆ ಎಂದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವಂತಹ ಈ ದೇವನಹಳ್ಳಿ ತಾಲ್ಲೂಕಿನ ಅಭಿವೃದ್ಧಿ ಕೆಲಸಗಳು ಸಾಕಷ್ಟಿದೆ. ಅದನ್ನು ಗಮನಿಸದೆ ಬಂದಂತಹ ಶಾಸಕರುಗಳು ಅವರ ಸಂಪಾದನೆ ಮಾಡುವಲ್ಲಿ ಮುಂದಾಗಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ಮಾಡಿ ತಾಲ್ಲೂಕನ್ನು ಮಾರುವಂತಹ ವ್ಯಕ್ತಿಗಳಿಗೆ ತಮ್ಮ ಮತಗಳನ್ನು ನೀಡಬೇಡಿ ಎಂದರು.
ಒಂದೇ ಒಂದು ಸಾರಿ ನನಗೆ ಅವಕಾಶ ಕಲ್ಪಿಸಿಕೊಡಿ. ನಿಮ್ನ ಮನೆ ಮಗನಾಗಿ ನಿಮ್ಮ ಸೇವೆ ಮಾಡುತ್ತೇನೆ. ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ವಿನ ಒತ್ತನ್ನು ನೀಡುತ್ತೇನೆ. ತಾಲ್ಲೂಕಿನಲ್ಲಿ ಸಾಕಷ್ಟು ಮಂದಿ ಉದ್ಯೋಗ ಇಲ್ಲದೆ ಎಷ್ಟೋ ಜನರು ಜೀವನ ಸಾಗಿಸುತ್ತಿದ್ದು, ಅಂತವರಿಗೆ ಕೆಲಸ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇನ್ನೂ ಇವರ ಪ್ರಚಾರಕ್ಕೆ ಪತ್ನಿ ಸಿಂಧು ಮತ್ತು ಬಿ.ಎಸ್.ಪಿ. ಜಿಲ್ಲಾ ಸಂಯೋಜಕ ನರಸಿಂಹರಾಜ್ ಹಾಗೂ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಸಾಥ್ ನೀಡಿ ತಾಲ್ಲೂಕ ವಿಶ್ವನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು. ಮತದಾರರಿಗೆ ತಮ್ಮ ಪ್ರಣಾಳಿಕೆ ಬಗ್ಗೆ ತಿಳಿಸಿ ಕಬ್ಬಿನ ರೈತನ ಗುರುತಿಗೆ ಮತ ಹಾಕುವಂತೆ ಮನವಿ ಮಾಡಿದರು.