ಸುದ್ದಿಮೂಲ ವಾರ್ತೆ
ಬೆಂಗಳೂರು.ಮಾ21: ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸ್ವಂತ ಸೂರನ್ನು ಒದಗಿಸುವುದು ಸರ್ಕಾರದ ಬಹು ದೊಡ್ಡ ಕನಸು ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಅವರು ಇಂದು ನಗರದ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಕೆ. ನಾರಾಯಣಪುರದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳ ಲೋಕಾರ್ಪಣೆ ಮತ್ತು ವಸತಿಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯನ್ನು ಕೈಗೆತ್ತಿಕೊಂಡಿದೆ ಕೇಂದ್ರ ಸರ್ಕಾರವು ರೂ. 600 ಕೋಟಿ ಅನುದಾನವನ್ನು ನೀಡಿದೆ ಎಂದು ತಿಳಿಸಿದರು.
ಬೆಂಗಳೂರು ಹೊರ ವಲಯದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 78 ಸ್ಥಳಗಳಲ್ಲಿ ವಾಸ ಮಾಡಲು ಯೋಗ್ಯವಿರುವ 493 ಎಕರೆ ಸರ್ಕಾರಿ ಜಮೀನನ್ನು ಬಳಸಿಕೊಂಡು 59,476 ಬಹುಮಹಡಿ ಮನೆಗಳನ್ನು ಮೂಲ ಸೌಕರ್ಯಗಳೊಂದಿಗೆ ನಿರ್ಮಿಸಲಾಗುತ್ತಿದೆ. ಕೆ. ನಾರಾಯಣಪುರ. ಕೆ. ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ 160, ತೋಟಗೆರೆಯಲ್ಲಿ 260 ಮತ್ತು ಕುಕ್ಕರಹಳ್ಳಿಯಲ್ಲಿ 512 ಯಲಹಂಕ ವಿಧಾನಸಭಾ ಕ್ಷೇತ್ರ, ಗೂಳಿಮಂಗಲ ಆನೇಕಲ್ ವಿಧಾನ ಸಭಾ ಕ್ಷೇತ್ರಯಲ್ಲಿ 144 ಮತ್ತು ಜೆ. ಭಂಗೀಪರ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ 96 ಒಟ್ಟು 1,172 ಮನೆಗಳನ್ನು ಲೋಕಾರ್ಪಣೆ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.
ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜು ಅವರು ಮಾತನಾಡಿ ಇಂದು ಕಂದಾಯ ಮತ್ತು ವಸತಿ ಇಲಾಖೆಯು ನಗರದ ಎಲ್ಲ ಬಡ ವರ್ಗದವರಿಗೂ ವಾಸಿಸಲು ಸ್ವಂತ ಸೂರ ಮಾಡಿ ಕೊಟ್ಟಿದೆ. ಇದರಿಂದ 1 ಬಿ.ಹೆಚ್.ಕೆ ಯನ್ನು 6 ಲಕ್ಷ ರೂಪಾಯಿಗಳಿಗೆ ಮತ್ತು 2 ಬಿ. ಹೆಚ್. ಕೆ ಯನ್ನು 14 ಲಕ್ಷಕ್ಕೆ ಫಲಾನುಭವಿಗಳು ಪಡೆಯಬಹುದು. ಫಲಾನುಭವಿಗಳ ಯಾರು ಕೂಡ ಯಾವುದೇ ಕಾರಣಕ್ಕೂ ಈ ಮನೆಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ವಾರ್ಡ್ ನ ಅಧ್ಯಕ್ಷ ಸತೀಶ್, ಮುಖಂಡರಾದ ನಾಗೇನಹಳ್ಳಿ ಲೋಕೇಶ್, ಅಭಯ್ ಶ್ರೀನಿವಾಸ್, ಸಂಚಿತಯ್ಯ ಮತ್ತಿತರ ಉಪಸ್ಥಿತರಿದ್ದರು.