ಸುದ್ದಿಮೂಲ ವಾರ್ತೆ
ಮೈಸೂರು, ಮೇ 18: ನಾನು ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸೋಲಲು ನಮ್ಮ ಪಕ್ಷದ ಕೆಲ ಮುಖಂಡರೇ ಕಾರಣರಾಗಿದ್ದಾರೆ. ಪಕ್ಷದಲ್ಲೇ ಇದ್ದುಕೊಂಡು, ಪಕ್ಷಕ್ಕೆ ದ್ರೋಹ ಬಗೆಯುತ್ತಿರುವ ಹಿತಶತ್ರುಗಳನ್ನು ಬಿಜೆಪಿ ಕಚೇರಿಯಿಂದ ದೂರ ಇಡಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ
ಚಾಮರಾಜನಗರದ ನೂತನ ಬಿಜೆಪಿ ಕಚೇರಿಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೋಲಿಗೆ ಕಾಂಗ್ರೆಸ್ ಪಕ್ಷವಾಗಲಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕಾರಣರಲ್ಲ. ನಮ್ಮಲ್ಲಿನ ಬಿಜೆಪಿ ಮುಖಂಡರೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಒಬ್ಬ ಒಬ್ಬ ಕಾರ್ಯಕರ್ತನ ಮನೆ ಮನೆಗೆ ಹೋಗಿ ಮತ ಹಾಕಿಸಿದ್ದರೆ ನಾನು ಗೆಲ್ಲುತ್ತಿದ್ದೆ. ಆದರೆ, ನಮ್ಮ
ಪಕ್ಷದಲ್ಲಿರುವ ಜನರು ಮಾಡಿದ ಪಾಪದ ಕೆಲಸದಿಂದ ನಾನು ಸೋಲುವಂತಾಯಿತು. ನಾನೇನು ದಡ್ಡ ಅಲ್ಲ, 45 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ ಎಂದರು.