ಸುದ್ದಿಮೂಲ ವಾರ್ತೆ
ಆನೇಕಲ್, ಸೆ. 16 : ದೇಶಭಕ್ತಿ ಗೀತೆಯನ್ನು ಹಾಡುವುದರಿಂದ ದೇಶದ ಬಗ್ಗೆ ಅಭಿಮಾನ ಮೂಡುತ್ತದೆ, ಭಾವ ಗೀತೆ ಹಾಡುವುದರಿಂದ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುತ್ತದೆ, ಜಾನಪದ ಗೀತೆ ಹಾಡುವುದರಿಂದ ನಮ್ಮ ಗ್ರಾಮೀಣ ಸಂಸ್ಕೃತಿಯ ಬಗ್ಗೆ ನೆನಪಾಗುತ್ತದೆ ಎಂದು ಜಾನಪದ ತಜ್ಞ ಮತ್ತು ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ನುಡಿದರು.
ಬೊಮ್ಮಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಆಯೋಜಿಸಿದ್ದ ದೇಶಭಕ್ತಿ ಗೀತೆಗಳ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸರ್ವತೋನ್ಮುಖ ಅಭಿವೃದ್ಧಿ ಎಂದರೆ ಕೇವಲ ಓದಿನಲ್ಲಿ ಹೆಚ್ಚು ಅಂಕ ಗಳಿಸುವುದನ್ನು ಕಲಿಸುವುದಲ್ಲ. ಅವರನ್ನು ಕಲೆ, ಸಾಹಿತ್ಯ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲೂ ಸಹ ತೊಡಗಿಸಿಕೊಂಡು ಓದಿನ ಜೆತೆಗೆ ಇವುಗಳಲ್ಲೂ ಪ್ರಾವಿಣ್ಯರನ್ನಾಗಿಸುವುದು ಎಂದರು.
ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ಜೀವನ ಮೌಲ್ಯಗಳನ್ನು ಕಲಿಸದೆ ಇದ್ದರೆ ಅವರು ಬೆಳೆದು ರಾಷ್ಟ್ರದ ದುಷ್ಟ ಪ್ರಜೆಗಳಾಗಿ ಮಾರ್ಪಾಡಾಗುವ ಆತಂಕ ಇದೆ. ಹಾಗಾಗಿ ಬಾಲ್ಯದಲ್ಲಿ ಮಕ್ಕಳಿಗೆ ಸರಿಯಾದ ಮೌಲ್ಯಾಧಾರಿತ ವಿಷಯಗಳು ಹಾಗೂ ದೇಶಭಕ್ತಿ ಮೂಡಿಸುವುದು ಪೋಷಕರ ಮತ್ತು ಶಿಕ್ಷಕರ ಆಧ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಗೀತಗಾಯನ ಸ್ಪರ್ಧೆಯು ಸಮಯೋಚಿತವಾದ ಕಾರ್ಯಕ್ರಮ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತರಾದ ಚಿನ್ನಸ್ವಾಮಿ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಕೊಂಡಜ್ಜಿ ಬಿ. ಷಣ್ಮುಖಪ್ಪ, ರಾಜ್ಯ ಕೇಂದ್ರ ಸ್ಥಾನಿಕ ಆಯುಕ್ತೆ ಮುಕ್ತ ಕಾಗಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.