ಸುದ್ದಿಮೂಲ ವಾರ್ತೆ
ಮೈಸೂರು, ಮೇ 23: ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ ಎಂಬುದು ನಮ್ಮ ಗುರಿ. ವಿಶ್ವವಿದ್ಯಾನಿಲಯದಲ್ಲಿ ಈಗ 64 ಕೋರ್ಸ್ಗಳಿವೆ. 51 ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲ್ಸೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ವಿವಿಗೆ ನ್ಯಾಕ್ನಿಂದ ಎ ಪ್ಲಸ್ ಮಾನ್ಯತೆ ದೊರೆತಿದೆ. ಈ ಮಾನ್ಯತೆಯು ಇನ್ನು ಐದು ವರ್ಷಗಳ ಕಾಲ ಅಂದರೆ ಮೇ 2028ರವರೆಗೆ ಇರಲಿದೆ. ಕರ್ನಾಟಕದಲ್ಲಿ ಈ ವರ್ಷ ನ್ಯಾಕ್ನಿಂದ ಎ ಪ್ಲಸ್ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯವಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಕಾರ್ಯವೈಖರಿ, ಫಲಿತಾಂಶ, ಮೂಲ ಸೌಕರ್ಯ, ಸಿಬ್ಬಂದಿ ಕಾರ್ಯಕ್ಷಮತೆ ಸೇರಿದಂತೆ ನಾನಾ ಅಂಶಗಳನ್ನು ಪರಿಶೀಲಿಸಿದ ನಂತರ ನ್ಯಾಕ್ ಈ ಮಾನ್ಯತೆ ನೀಡಿದೆ. ಈಗ ಅನುದಾನ ನೀಡಲು ಕೋರಬಹುದು. ನ್ಯಾಕ್ನಿಂದ ಎ ಪ್ಲಸ್ ಮಾನ್ಯತೆ ದೊರೆತಿರುವುದರಿಂದ ಮುಕ್ತ ವಿಶ್ವವಿದ್ಯಾ ನಿಲಯದಿಂದ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿಗಳಿಗೆ ಪ್ರವೇಶ ಪಡೆಯಲು ಅವಕಾಶ ಲಭ್ಯವಾಗಿದೆ ಎಂದರು.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಜನವರಿಯಲ್ಲಿ ಸಾಮಾನ್ಯವಾಗಿ 5-6 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈ ವರ್ಷ ಜನವರಿಯಲ್ಲಿ ವಿಶ್ವವಿದ್ಯಾ ನಿಲಯದ ಸತತ ಪರಿಶ್ರಮದಿಂದ 18,524 ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಾರ ಮಾಡಿದ್ದರಿಂದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.
ಈಗ ವಿಶ್ವವಿದ್ಯಾನಿಲಯದ ಆದಾಯದಲ್ಲೂ ಹೆಚ್ಚಳವಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಹೀಗೆ ವರ್ಷದಲ್ಲಿ ಎರಡು ಬಾರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದೆ ಎಂದು ವಿವರಿಸಿದರು.
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ಕೆ.ಎಲ್.ಎನ್.ಮೂರ್ತಿ, ರಿಜಿಸ್ಟ್ರಾರ್ (ಮೌಲ್ಯಮಾಪನ) ಪ್ರೊ.ಕೆ.ಬಿ.ಪ್ರವೀಣ್, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಡೀನ್ ಅಕಾಡೆಮಿಕ್ ಡಾ.ಎನ್. ಲಕ್ಷ್ಮೀ ಇತರರು ಇದ್ದರು.