ಸುದ್ದಿಮೂಲ ವಾರ್ತೆ
ದಾವಣಗೆರೆ, ಅ.6: ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನವನ್ನು ಡಿ.23 ಮತ್ತು 24ರಂದು ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ದಾವಣಗೆರೆಯಲ್ಲಿಂದು ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಬಳಿಕ ಈ ವಿಷಯ ತಿಳಿಸಿದ ಅವರು, ಈ ಹಿಂದೆ 1940ರಲ್ಲಿ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನ ನಡೆದಿತ್ತು. ಈಗ ಮತ್ತೆ ಮಹಾಧಿವೇಶನ ಆಯೋಜಿಸಲಾಗುತ್ತಿದೆ ಎಂದರು.
ಒಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದುರ್ಬಲತೆ ಇದೆ. ಹೀಗಾಗಿ ಲಕ್ಷಾಂತರ ಸಮಾಜದ ಬಾಂಧವರನ್ನು ಸೇರಿಸಿ ನಭೂತೋ ನಭವಿಷ್ಯತಿ ಎಂಬಂತೆ ಈ ಮಹಾಧಿವೇಶನ ನಡೆಸಬೇಕು ಎಂಬುದು ಸಭಾದ ಆಶಯವಾಗಿದೆ ಎಂದರು.
ಇಡೀ ವಿಶ್ವಕ್ಕೆ ಸಾಮಾಜಿಕ ನ್ಯಾಯಕೊಟ್ಟ ಸಮುದಾಯ ವೀರಶೈವ ಲಿಂಗಾಯತ ಸಮುದಾಯವಾಗಿದ್ದು,
ಇಂದು ನಾವೇ ಸಾಮಾಜಿಕ ನ್ಯಾಯ ಕೇಳುವ ಸ್ಥಿತಿ ಬಂದಿದೆ ಎಂದ ಅವರು, ಮಂಡಲ್ ವರದಿಯಲ್ಲಿ ಸಮುದಾಯದ ಯುವಜನರಿಗೆ ಅನ್ಯಾಯವಾಗಿದ್ದು, ಕೇಂದ್ರದ ಒಬಿಸಿ ಮೀಸಲು ಪಟ್ಟಿಯಲ್ಲಿ ಸಂವಿಧಾನಬದ್ಧವಾಗಿ ಲಿಂಗಾಯತ ವೀರಶೈವ ಸಮುದಾಯದ ಎಲ್ಲ ಒಳ ಪಂಗಡಗಳನ್ನೂ ಸೇರಿಸಬೇಕು ಎಂದು ಈ ಮಹಾಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು.
ಪಕ್ಷಾತೀತವಾಗಿ ಸಮಾಜದ ಎಲ್ಲ ಗಣ್ಯರು, ನಾಯಕರು ಕಲೆತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನೂ ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಈ ಬೃಹತ್ ಮಹಾಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
63 ವರ್ಷಗಳ ನಂತರ:
ಭೀಮಣ್ಣ ಖಂಡ್ರೆ ಅವರು ಅಧ್ಯಕ್ಷರಾಗಿದ್ದಾಗ ಸುತ್ತೂರಿನಲ್ಲಿ ಮಹಾಧಿವೇಶನ ನಡೆಸಲಾಗಿತ್ತು, ಅದಕ್ಕೂ ಪೂರ್ವದಲ್ಲಿ, ಬೆಳಗಾವಿಯಲ್ಲಿ ಅಧಿವೇಶನ ನಡೆದಿತ್ತು. ಈವರೆಗೆ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಸೋಲಾಪುರದಲ್ಲಿಯೂ ಅಧಿವೇಶನ ನಡೆದಿತ್ತು. ಈ ಬಾರಿ 63 ವರ್ಷಗಳ ನಂತರ ಮತ್ತೊಮ್ಮೆ ದಾವಣಗೆರೆಯಲ್ಲಿ ಮಹಾಧಿವೇಶನ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ ವೀರಶೈವ ಲಿಂಗಾಯತರು ಪ್ರಮುಖ ಸಮುದಾಯವಾಗಿದ್ದು, ಲಕ್ಷಾಂತರ ಜನರನ್ನು ಸೇರಿಸುವುದು ಕಷ್ಟವೇನೂ ಆಗುವುದಿಲ್ಲ. ಇಷ್ಟು ಜನರನ್ನು ಸೇರಿಸಲು ದಾವಣಗೆರೆಯೇ ಸೂಕ್ತ ಸ್ಥಳವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ ಎಂದರು.
ಇಂದಿನಿಂದ ಡಿಸೆಂಬರ್ 23ರವರೆಗೆ ಸಮರೋಪಾದಿಯಲ್ಲಿ ಸಮಾಜದ ಎಲ್ಲರೂ ಶ್ರಮಿಸಿದರೆ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬಹುದಾಗಿದೆ. ಇದಕ್ಕಾಗಿ ಮಹಾಧಿವೇಶನ ಸ್ವಾಗತ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ, ಹಣಕಾಸು ಸಮಿತಿ, ದಾಸೋಹ ಸಮಿತಿ, ಮಾಧ್ಯಮ ಘಟಕ, ಮೆರವಣಿಗೆ ಸಮಿತಿಯೇ ಮೊದಲಾದ ಉಪ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಉದ್ಘಾಟನಾ ಸಮಾರಂಭ, ಯುವ ಅಧಿವೇಶನ, ಮಹಿಳಾ ಅಧಿವೇಶನ, ರೈತ ಅಧಿವೇಶನವನ್ನು ಈ 2 ದಿನಗಳ ಮಹಾಧಿವೇಶನದಲ್ಲಿ ಹಮ್ಮಿಕೊಳ್ಳಲಾಗುವುದು. ಈ ಅಧಿವೇಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ ಮನವಿ ಮಾಡಿದರು.