ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.2: ಪೂಜನೀಯ ದೇವೇಗೌಡರೇ, ನಿಮ್ಮ ಸುಪುತ್ರರು ಪದೇ ಪದೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರೆ ಪಕ್ಷದ ನಾಯಕರು, ಕಾರ್ಯಕರ್ತರು ಎಲ್ಲಿ ಹೋಗಬೇಕು?” ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಪ್ರಶ್ನಿಸಿದ್ದಾರೆ.
ನಿಮ್ಮ ಸುಪುತ್ರರು ದಿನಬೆಳಗಾದರೆ ಸಿದ್ಧಾಂತ ಬದಲಿಸುತ್ತಾರೆ, ಯಾರ ಜೊತೆ ಬೇಕಾದರೂ ಸಂಬಂಧ ಬೆಳೆಸುತ್ತಾರೆ. ಆದರೆ ಸಿದ್ಧಾಂತ ನಂಬಿರುವ ಕಾರ್ಯಕರ್ತರು ಏನಾಗಬೇಕು? ಎಂದು ಕುಟುಕಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ‘ಮಿಸ್ಟರ್ ಡಿ ಕೆ ಶಿವಕುಮಾರ್ ನಿಮ್ಮ ಆಟ ನಡೆಯಲ್ಲ’ ಎಂದು ತಮಗೆ ಎಚ್ಚರಿಕೆ ಕೊಟ್ಟಿರುವ ದೇವೇಗೌಡರನ್ನು ಹೀಗೆ ಪ್ರಶ್ನೆ ಮಾಡಿದ್ದಾರೆ.
ದೇವೇಗೌಡರರು ದೊಡ್ಡವರು. ಬಹಳ ಗೌರವದಿಂದ ಅವರ ಮಾತನ್ನು ಸ್ವೀಕರಿಸುತ್ತೇನೆ. ದೇವೇಗೌಡರೇ, ನೀವು ಮತ್ತು ನಿಮ್ಮ ಪಕ್ಷದ ನಾಯಕರು ಅನೇಕ ಬಾರಿ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಿರಿ. ಆದರೆ ಈಗ ಕೈ ಜೋಡಿಸಿದ್ದೀರಿ. ರಾಜಕಾರಣ ಏನೇ ಇರಲಿ, ಬಿಜೆಪಿ ಜತೆ ಮೈತ್ರಿ ಮೂಲಕ ನೀವು ಕಳುಹಿಸಿರುವ ಸಂದೇಶವನ್ನು ಮುಗ್ಧ ಜನ ಹೇಗೆ ಸ್ವೀಕರಿಸಬೇಕು? ಇಂತಹ ಪರಿಸ್ಥಿತಿಯಲ್ಲಿ ಸಿದ್ಧಾಂತ ನಂಬಿ ನಮ್ಮ ಪಕ್ಷಕ್ಕೆ ಬಂದವರನ್ನು ಪಕ್ಷದ ಅಧ್ಯಕ್ಷನಾಗಿ ನಾನು ಕರೆದುಕೊಳ್ಳಬಾರದೇ? ಎಂದು ಕೇಳಿದ್ದಾರೆ.
ಮಹಾತ್ಮಗಾಂಧಿ ಜನ್ಮದಿನದಂದು ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದಿರುವ ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ರಾಜ್ಯಾದ್ಯಂತ ಮೂಲೆ ಮೂಲೆಯಿಂದ ಸಾವಿರಾರು ಮಂದಿ ಪಕ್ಷ ಸೇರಲು ಮುಂದಾಗಿದ್ದಾರೆ. ಈ ಹಿಂದೆ ನೀವು ಕೂಡ ಕಾಂಗ್ರೆಸ್ ನಿಂದ ಅನೇಕ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚೆಸ್, ಫುಟ್ಬಾಲ್ ಗೇಮ್ ಆಡಿಲ್ಲವೇ? ನೀವು ಯಾರನ್ನು ಬೇಕಾದರೂ ಕಟ್ಟಿಹಾಕಿಕೊಳ್ಳಿ, ಮನೆಯೊಳಗೇ ಕೂಡಿ ಹಾಕಿಕೊಳ್ಳಿ. ನಾವು ಬೇಡ ಎನ್ನುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಈ ಹಿಂದೆ ನಮ್ಮ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಸಿ.ಎಂ. ಇಬ್ರಾಹಿಂ ಅವರನ್ನು ಕರೆದುಕೊಂಡು ಹೋಗಿ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೀರಿ. ಅವರು ಪಕ್ಷದ ಅಧ್ಯಕ್ಷನಾದ ನನಗೇ ಮೈತ್ರಿ ವಿಚಾರ ತಿಳಿಸಲಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಪಕ್ಷದ ಬಹುತೇಕ ಮುಖಂಡರು, ಕಾರ್ಯಕರ್ತರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕರು ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆ.
ನಾನು ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುವ ಅಗತ್ಯವಿಲ್ಲ, ಸಾಗರೋಪಾದಿಯಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಬೀದರ್ ನಿಂದ ಚಾಮರಾಜನಗರದವರೆಗೂ ಯಾವುದೇ ಜಿಲ್ಲೆಯಲ್ಲಿನ ನಾಯಕರು ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ನಮ್ಮ ಪಕ್ಷಕ್ಕೆ ಸ್ವಾಗತ. ಈ ಪಕ್ಷ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ನಾನು ಇಲ್ಲದಿದ್ದರೂ ನಮ್ಮ ಪಕ್ಷ ಮುಂದುವರಿಯಲಿದೆ ಎಂದರು.
ಪಕ್ಷ ಸೇರ್ಪಡೆ:
ಜೆಡಿಎಸ್ ಮುಖಂಡ ಚನ್ನಪಟ್ಟಣ ಮಾಜಿ ಶಾಸಕ ಎಂ ಸಿ ಅಶ್ವಥ್ ಹಾಗೂ ಅವರ ಅಪಾರ ಬೆಂಬಲಿಗರು ಸೇರಿದಂತೆ ಚನ್ನಪಟ್ಟಣ ಹಾಗೂ ರಾಮನಗರದ ಜೆಡಿಎಸ್ ನ ಅನೇಕ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಈ ವೇಳೆ ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಮ್ ಅಹ್ಮದ್, ಚಂದ್ರಪ್ಪ, ಶಾಸಕರಾದ ಬಾಲಕೃಷ್ಣ, ವಿನಯ್ ಕುಲಕರ್ಣಿ, ಮಾಜಿ ಎಂಎಲ್ಸಿ ಪುಟ್ಟಣ್ಣ, ರಾಮನಗರ ಡಿಸಿಸಿ ಅಧ್ಯಕ್ಷ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.