ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.1: ಸ್ವಾತಂತ್ರ್ಯೋತ್ಸವ ಅಂಗವಾಗಿ ಆ.8 ರಿಂದ 15ರ ವರೆಗೆ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಭವ್ಯ ವಿಧಾನಸೌಧದ ಪುಷ್ಪ ಮಾದರಿ ಹಾಗೂ ಕೆಂಗಲ್ ಹನುಮಂತಯ್ಯನವರ 14 ಅಡಿ ಎತ್ತರದ ಬೃಹತ್ ಪುಷ್ಪ ಮಾದರಿ ಪ್ರತಿಮೆಯನ್ನು ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.
ಅವರು ಇಂದು ಲಾಲ್ಬಾಗ್ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಈ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಕುರಿತು ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈ ಫಲಪುಷ್ಪ ಪ್ರದರ್ಶನವನ್ನು ಲಾಲ್ಬಾಗ್ನ ಗಾಜಿನಮನೆಯಲ್ಲಿ ಆಗಸ್ಟ್ 4 ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುವರು. ಅಲ್ಲದೆ ಇಕೆಬಾನ, ಜಾನೂರ್ ಥಾಯ್ ಆರ್ಟ್ ಹಾಗೂ ಇತರೆ ಪೂರಕ ಕಲೆಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ನಂತರ ಫಲಪುಷ್ಪ ಪ್ರದರ್ಶನ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ (ಲಾಲ್ಬಾಗ್) ಉಪನಿರ್ದೇಶಕಿ ಜಿ. ಕುಸುಮ, ಈ ಪ್ರದರ್ಶನವು ಆಗಸ್ಟ್ 4 ರಿಂದ 15 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ವಯಸ್ಕರಿಗೆ 70 ರೂಪಾಯಿ ಹಾಗೂ ಶನಿವಾರ ಮತ್ತು ರಜಾ ದಿನಗಳು 80 ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ರೂ.30 ನಿಗಧಿಪಡಿಸಲಾಗಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ 10ನೇ ತರಗತಿ ವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ ಎಂದರು.
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುವುದರಿಂದ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರಿಗೆ ಕುಡಿಯುವ ನೀರು, ಪ್ರಥಮ ಚಿಕಿತ್ಸೆ, ಹೆಲ್ಪ್ ಡೆಸ್ಕ್, ಪೊಲೀಸ್ ನಿಯೋಜನೆ, ಸಿಸಿ ಕ್ಯಾಮೆರಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಗಿಡಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಲಾಲ್ಬಾಗ್ನ ಐತಿಹಾಸಿಕ ಬಂಡೆ ಹಿಂಭಾಗದಲ್ಲಿ ಕಳೆದ 70 ವರ್ಷಗಳಿಂದ ಖಾಲಿಯಿದ್ದ ಆರು ಎಕರೆ ಪ್ರದೇಶದಲ್ಲಿ 132 ಪಶ್ಚಿಮಘಟ್ಟದ ಸಸ್ಯ ಪ್ರಭೇದಗಳಿಗೆ ಸೇರಿದ 450 ಸಸಿಗಳನ್ನು ನೆಡಲಾಗುತ್ತಿದೆ. ಲಾಲ್ಬಾಗ್ ಚಿಕ್ಕ ಕೆರೆ ಬಳಿಯಿರುವ ಆಕರ್ಷಕ ಜಲಪಾತವನ್ನು ವೀಕ್ಷಿಸಲು ಅನುವು ಮಾಡಲಾಗುವುದು.
ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಸಹ ಏರ್ಪಡಿಸಲಾಗಿದೆ. ಈ ಬಾರಿಯ ಪ್ರದರ್ಶನವನ್ನು 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಮೋಹನ್ರಾಜ್ ಕೆ.ಪಿ. ತೋಟಗಾರಿಕೆ ಇಲಾಖೆ ನಿರ್ದೇಶಕರಾದ ರಮೇಶ್ ಡಿ.ಎನ್, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ಹಾಗೂ ಇತರ ಅಧಿಕಾರಿಗಳು ಉಪಸ್ಥಿರಿದ್ದರು.