ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಅ. 25 : ಜಿಲ್ಲೆಯ ಪುರಾಣ ಪ್ರಸಿದ್ದ ಆಲಂಬಗಿರಿ ಕ್ಷೇತ್ರದ ಕಲ್ಕಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನವರಾತ್ರಿಯ ವಿಜಯದಶಮಿಯಂದು ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ವಿಜಯದಶಮಿಯಂದು ಬೆಳಗಿನಿಂದಲೇ ಭಕ್ತರು ದೇವಾಲಯದಲ್ಲಿ ಪೂಜೆಗಾಗಿ ಆಗಮಿಸಿದ್ದರು. ವಿಜಯದಶಮಿಯಂದು ವಿಶೇಷವಾಗಿ ಶಮೀವೃಕ್ಷದ ಪೂಜೆಯನ್ನು ಏರ್ಪಡಿಸಲಾಗಿತ್ತು ದೇವಾಲಯದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಶಮೀ ವೃಕ್ಷ ಮಂಟಪದ ಹತ್ತಿರ ನೆರವೇರಿಸಲಾಯಿತು.
ಶಮೀವೃಕ್ಷ ಮಂಟಪದ ಹತ್ತಿರಕ್ಕೆ ಭೂನೀಳಾ ಸಮೇತ ವೆಂಕಟರಮಣಸ್ವಾಮಿಯ ಉತ್ಸವ ವಿಗ್ರಹಗಳನ್ನು ವಿಶೇಷ ಮಂಟಪದಲ್ಲಿ ಅಲಂಕರಿಸಿ ಕರೆದೊಯ್ಯಲಾಯಿತು. ನೂರಾರು ಭಕ್ತರು ಆಗಮಿಸಿದ್ದರು. ಸಂಕೀರ್ತನಾ ಪಾದಯಾತ್ರೆಯಲ್ಲಿ ದೇವರ ಉತ್ಸವದೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವದಲ್ಲಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಎಂ.ಆರ್.ಜಯರಾಮ್ ದಂಪತಿಗಳು ಭಾಗವಹಿಸಿ ಸಂಕೀರ್ತನೆಯೊಂದಿಗೆನಡೆದು ಬಂದರು.
ನಂತರ ಆಲಂಬಗಿರಿ ರಥ ಬೀದಿಯಲ್ಲಿ ಸ್ವಾಮಿಯ ಉತ್ಸವವನ್ನು ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಮನೆ ಮನೆಗೂ ಪೂಜೆಗೆ ನೀಡಿ ಭಕ್ತಿ ಭಾವವನ್ನು ಮೆರೆದರು.