ಸುದ್ದಿಮೂಲ ವಾರ್ತೆ
ಬೆಂಗಳೂರು, ನ.13: ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಾಗಿನಿಂದ ಪಕ್ಷದ ಕಾರ್ಯಕರ್ತರು, ಬೂತ್ ಅಧ್ಯಕ್ಷರು ಹಾಗೂ ಹಿರಿಯ ನಾಯಕರುಗಳನ್ನು ಭೇಟಿ ಮಾಡುತ್ತಿರುವ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಪಕ್ಷ ಸಂಘಟನೆ ಕುರಿತು ಹಿರಿಯ ಮುಖಂಡರು ಸಲಹೆ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ ಅವರು ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಕೃಷ್ಣಪ್ಪ, ಸಿ.ಕೆ.ರಾಮಮೂರ್ತಿ ಇದ್ದರು.
ಯಶಸ್ಸು ಕಾಣುತ್ತೀಯ ಎಂದ ಹಸಿದ ಗೌಡರು:
ಮಾಜಿ ಪ್ರಧಾನಿಗಳ ಭೇಟಿ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ, ರಾಷ್ಟ್ರೀಯ ಪಕ್ಷದಲ್ಲಿ ಕಿರಿಯವನಾದ ನಿನಗೆ ನರೇಂದ್ರ ಮೋದಿಯವರು ಅವಕಾಶ ಕೊಟ್ಟಿದ್ದಾರೆ. ತಂದೆಯವರಂತೆ ನೀನು ಯಶಸ್ಸು ಕಾಣುತ್ತೀಯಾ, ಅವರ ದಾರಿಯಲ್ಲಿ ಹೋಗು ಯಶಸ್ಸು ಸಿಗುತ್ತದೆ ಎಂದು ಹರಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ ಎಂದರು.
ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿಕೊಂಡು ಹೋಗಬೇಕು. ಏನೇ ವ್ಯತ್ಯಾಸಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗುವಂತೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾತಿಂದ ನನಗೆ ತುಂಬಾ ಸಂತೋಷವಾಗಿದೆ. ಭೇಟಿ ವೇಳೆ ಅವರ ಹೋರಾಟ ಮತ್ತು ನಮ್ಮ ತಂದೆಯವ ಹೋರಾಟಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಪಾದಯಾತ್ರೆ ಮತ್ತು ಹೋರಾಟ ಅಂದರೆ ನೆನಪು ಆಗೋದೇ ಎರಡು ಹೆಸರು, ಅದು , ಯಡಿಯೂರಪ್ಪ ಮತ್ತು ದೇವೇಗೌಡರ ಹೆಸರು. ಅವರ ಸಲಹೆಗಳನ್ನು ನಾನು ಅಳವಡಿಸಿಕೊಂಡು ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳ ಮನೆಗೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಇಂದು ಬೆಳಿಗ್ಗೆ ಮೊದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಆರ್.ಟಿ. ನಗರದ ನಿವಾಸದಲ್ಲಿ ಭೇಟಿ ಮಾಡಿ ಅವರ ಜತೆ ಪಕ್ಷದ ಆಗು-ಹೋಗುಗಳ ಬಗ್ಗೆ ವಿಜಯೇಂದ್ರ ಚರ್ಚೆ ನಡೆಸಿದರು.
ನಂತರ ಸದಾಶಿವನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ಆಗಮಿಸಿದ ವಿಜಯೇಂದ್ರ ಅವರು ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಗೆ ಅವರ ಸಲಹೆ, ಮಾರ್ಗದರ್ಶನ ಕೋರಿದರು.
ವಿಜಯೇಂದ್ರ ಹೇಳಿಕೆ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಾಗಿ ವರಿಷ್ಠರು ತಮ್ಮನ್ನು ನೇಮಕ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿ, ಈ ನೇಮಕದಿಂದ ರಾಜ್ಯ ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಹೇಳಿದರು. ಪಕ್ಷ ಸಂಘಟನೆ ವಿಚಾರದಲ್ಲಿ ಸಹಕಾರ, ಮಾರ್ಗದರ್ಶನ ನೀಡುವ ಮಾತುಗಳನ್ನು ಬೊಮ್ಮಾಯಿ ಅವರು ಆಡಿದ್ದು, ಎಲ್ಲ ಹಿರಿಯರು ಜತೆ ಇರಲಿದ್ದೇವೆ ಎಂದು ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ನಿಮ್ಮ ನೇತೃತ್ವದಲ್ಲಿ ಮಾಡೋಣ ಎಂದು ಬೊಮ್ಮಾಯಿ ಹೇಳಿದರು ಎಂದು ವಿಜಯೇಂದ್ರ ತಿಳಿಸಿದರು.
ನ. 15ರಂದು ನಡೆಯುವ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆಯೂ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿರುವುದಾಗಿ ವಿಜಯೇಂದ್ರ ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಎಂ. ಕೃಷ್ಣಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಬೊಮ್ಮಾಯಿ ಪೋಸ್ಟ್
ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ನನ್ನ ಮನೆಗೆ ಆಗಮಿಸಿ ದೀಪಾವಳಿ ಶುಭಾಶಯಗಳನ್ನು ಕೋರಿ, ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು. ಅವರ ಅಧ್ಯಕ್ಷರ ಅವಧಿಯಲ್ಲಿ ಪಕ್ಷದ ಬೇರುಗಳು ಮತ್ತಷ್ಟು ಸದೃಢಗೊಳ್ಳಲಿ ಎಂದು ಶುಭ ಹಾರೈಸಿರುವುದಾಗಿ ಬಸವರಾಜ ಬೊಮ್ಮಾಯಿ ಅವರು ‘ಎಕ್ಸ್ ‘ನಲ್ಲಿ ಟ್ವೀಟ್ ಮಾಡಿದ್ದಾರೆ.