ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಮೇ 26: ಸರ್ಕಾರ ಜಾರಿ ಮಾಡುವ ಅನೇಕ ಕಾನೂನು ಪ್ರಥಮವಾಗಿ ಮಹಿಳೆಯರಿಗೆ ತಲುಪಬೇಕು. ಪ್ರಾಥಮಿಕ ಹಾಗೂ ಪ್ರೌಢ ವ್ಯವಸ್ಥೆಯ ಹೆಣ್ಣು ಮಕ್ಕಳಿಗೆ ಹೆಚ್ಚಿನ ಜಾಗೃತಿ ಅವಶ್ಯ ಎಂದು ಜನತಾಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪ್ರಭಾವತಿ ಹೇಳಿದರು.
ಜನತಾಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಊರಿಗೊಂದು ವನ, ಊರಿಗೊಂದು ಕೆರೆ ಹಾಗೂ ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ವಿಚಾರವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಆದೇಶದಂತೆ ಈ ಕಾರ್ಯಕ್ರಮವನ್ನು ಗ್ರಾಮಪಂಚಾಯತ್ ಮಟ್ಟದಲ್ಲಿ ಜನತಾಕಾಲೋನಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ, ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿದ್ದು ಜಿಲ್ಲಾ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಸುಮಾರು 7 ಸಾವಿರ ಸ್ಥಳಗಳಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದರು.
ಊರಿಗೊಂದು ವನ ನಿರ್ಮಾಣದಿಂದ ನಮ್ಮ ಸುತ್ತಮುತ್ತಲಿನ ಪರಿಸರ ಶುದ್ದವಾಗಿರುತ್ತದೆ. ಶುದ್ದ ಗಾಳಿ
ದೊರೆಯುತ್ತದೆ. ಊರಿಗೊಂದು ಕೆರೆ ನಿರ್ಮಾಣದಿಂದ ಅಂತರ್ಜಲ ಮಟ್ಟ ವೃದ್ದಿಯಾಗುತ್ತದೆ. ಪಶು ಪ್ರಾಣಿಗಳಿಗೆ ನೀರು ಸಿಗುತ್ತದೆ ರೈತಾಪಿ ವರ್ಗದ ಬದುಕು ಹಸನಾಗುತ್ತದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡಗೆಟ್ಟುವಿಕೆ ವಿಚಾರವಾಗಿ ಶಾಲಾ ಮಕ್ಕಳ ಪೋಷಕರಿಗೆ ಜಾಗೃತಿ ಮೂಡಿಸಲಾಯಿತು. ಮನೆಯೇ ಮೊದಲ ಪಾಠ ಶಾಲೆ ಹೆಣ್ಣುಮಕ್ಕಳಿಗೆ ತಾಯಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ಮಂಜುಳಾ,ಭಾರತಿ, ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳು, ಸಹ ಶಿಕ್ಷಕ ವರ್ಗ, ಪೋಷಕ ವರ್ಗದವರು ಹಾಜರಿದ್ದರು.