ಸುದ್ದಿಮೂಲವಾರ್ತೆ ಮಾನ್ವಿ ಜ-14: ಮಾನ್ವಿ ಮತ್ತು ಸಿಂಧನೂರು ತಾಲೂಕಿನ ಅಂದಾಜು 35 ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿರುವ ಪೋತ್ನಾಳ್ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸಾರಿಗೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಯಚೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಬಳ್ಳಾರಿಯಿಂದ ರಾಯಚೂರಿಗೆ ಆಗಮಿಸುವ ಸಂದರ್ಭದಲ್ಲಿ ಪೋತ್ನಾಳ್ ಗ್ರಾಮದ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಪೋತ್ನಾಳ್ ಗ್ರಾಮ 25 ಸಾವಿರಕ್ಕೂ ಹೆಚ್ಚು ಜನರನ್ನು ಹೊಂದಿದ್ದು ಜಿಲ್ಲಾ ಹಾಗೂ ಎರಡು-ಮೂರು ತಾಲೂಕಾ ಕೇಂದ್ರಗಳಿಗೆ ಹೋಗಲು ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಈ ಗ್ರಾಮದಲ್ಲಿ ಸರಕಾರಿ ಕಾಲೇಜು, ಸರಕಾರಿ ಹೈಸ್ಕೂಲು ಹಾಗೂ ಖಾಸಗಿ ಶಾಲಾ-ಕಾಲೇಜುಗಳಿದ್ದು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡಲು ವಿವಿಧ ಹಳ್ಳಿಗಳಿಂದ ಪ್ರೋತ್ನಾಳ್ ಗ್ರಾಮಕ್ಕೆ ಬಂದು ಹೋಗುತ್ತಿದ್ದಾರೆ.
ಹೀಗಾಗಿ ನಮ್ಮ ಗ್ರಾಮದಲ್ಲಿ ಸರಕಾರಿ ಜಮೀನು ಇದ್ದು ಈ ಜಮೀನಿನ ಸರ್ವೆ ನಂ 182 ಒಟ್ಟು 8 ಎಕರೆ ಜಮೀನು ಇದ್ದು ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟಿದೆ. ಇದರಲ್ಲಿ 2 ಎಕರೆ ಜಮೀನನ್ನು ಸಾರಿಗೆ ಇಲಾಖೆಗೆ ವರ್ಗಾಹಿಸಿ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಸ್ ಕುಮಾರಸ್ವಾಮಿ, ವಿರೂಪಾಕ್ಷಿಗೌಡ, ಈರಣ್ಣ ಪೋತ್ನಾಳ್, ಈಶ್ವರಗೌಡ ಮುದ್ದನಗುಡ್ಡಿ, ಬಸವರಾಜ ಗುಜ್ಜಲ್, ಅಶೋಕ, ಗುಂಡಪ್ಪ ಮುದ್ದನಗುಡ್ಡಿ, ಅಮರೇಶ ಕಟ್ಟಿಮನಿ, ಶಂಕರಗೌಡ ಬಾಪೂರು, ಶಂಕರಗೌಡ ಮುದ್ದನಗುಡ್ಡಿ, ತಾಯಪ್ಪ ನಾಯಕ, ಸೂಗಯ್ಯಸ್ವಾಮಿ, ಗಂಗಪ್ಪ, ಚಂದ್ರಶೇಖರ ಟೇಲರ್, ಬಸವರಾಜ ಭೋವಿ ಇತರರು ಇದ್ದರು.