ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ನ.27: ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಗಡಿಯನ್ನು ಹಂಚಿಕೊಂಡ ಭಾಗವಾದ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ರಾಜ್ಯದ ನಾಯಕರಷ್ಟೆ ಅಲ್ಲ ಜಿಲ್ಲೆಯಲ್ಲಿನ ಎಲ್ಲ ಪಕ್ಷಗಳ ಪ್ರಮುಖ ನಾಯಕರು ಅಲ್ಲಿ ಬೀಡುಬಿಟ್ಟಿದ್ದಾರೆ.
ಅದರಲ್ಲೂ ಆಂಧ್ರ, ತೆಲಂಗಾಣಕ್ಕೆ ಅಂಟಿಕೊಂಡ ತೆಲುಗು ಭಾಷೆ ಗೊತ್ತಿರುವ ಮತ್ತು ಮಾತನಾಡುವ ಇಲ್ಲಿನ ನಾಯಕರಿಗೆ ಅಲ್ಲಿನ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಕೇಳಲು ಫುಲ್ ಡಿಮಾಂಡ್.
ತೆಲಂಗಾಣದ ಕುತ್ಬುಲ್ಲಾಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀಕುಣ ಶ್ರೀ ಶೈಲಂ ಗೌಡ್ ಅವರಪರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹಾಗೂ ತಂಡ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕಳೆದ ಹಲವು ದಿನಗಳಿಂದಲೂ ಅಲ್ಲೇ ಬೀಡುಬಿಟ್ಟಿರುವ ಸೀಕಲ್ ರಾಮಚಂದ್ರಗೌಡ , ಗೋವಾ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ್ ಸೇಠ್ ತನವಡೆ ಅವರ ನೇತೃತ್ವದ ತಂಡದಲ್ಲಿ ಕುತ್ಬುಲ್ಲಾಪುರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸೀಕಲ್ ಆನಂದ್ಗೌಡ, ಕನಕಪ್ರಸಾದ್, ಭರತ್ ಇನ್ನಿತರೆ ಮುಖಂಡರ ಜತೆಗೂಡಿ ಬಿಜೆಪಿಯ ಕೇಂದ್ರ ಸರಕಾರದ ಯೋಜನೆಗಳನ್ನು ಮತದಾರರ ಮುಂದಿಟ್ಟು ಮತ ಕೇಳುತ್ತಿದ್ದಾರೆ.
ಅಷ್ಟೇ ಅಲ್ಲ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಇನ್ನಷ್ಟು ಬಲಪಡಿಸಲು ಬಿಜೆಪಿ ಅಭ್ಯರ್ಥಿ ಶ್ರೀಕುಣ ಶ್ರೀ ಶೈಲಂ ಗೌಡ್ ಅವರನ್ನು ಗೆಲ್ಲಿಸುವಂತೆ ವಿವೇಕಾನಂದ ನಗರ, ಆದರ್ಶನಗರ ಇನ್ನಿತರೆ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಮತಯಾಚನೆ ನಡೆಸುತ್ತಿದ್ದಾರೆ.