ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.27: ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದಿಂದ ಪ್ರತಿ ವರ್ಷ ದಂತೆ ಈ ಬಾರಿಯೂ ಸೆ. 30 ರಂದು ರಾಜ್ಯ ಮಟ್ಟದ ವಿರಾಟ್ ವಿಶ್ವಕರ್ಮ ಮಹೋತ್ಸವವನ್ನು ವೈಭವದಿಂದ ಹಮ್ಮಿಕೊಳ್ಳಲಾಗಿದ್ದ, ಅಂದು ರಾಜ್ಯ, ರಾಷ್ಟ್ರ ಮಟ್ಟದ ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ವಿಶ್ವಕರ್ಮಶ್ರೀ, ವಿಶ್ವಕರ್ಮ ಸೇವಾ ರತ್ನ ಸೇರಿ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಗಳಾದ ಬಿ. ಎಸ್. ಯಡಿಯೂರಪ್ಪ, ಎಚ್. ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಮಾನ್ಯ ಸಚಿವರು, ಶಾಸಕರು, ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ವಿಶ್ವಕರ್ಮ ಶ್ರೀ, ವಿಶ್ವ ಕರ್ಮ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಆಡಳಿತ ಕ್ಷೇತ್ರದಲ್ಲಿ ರಾಜ್ಯ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ, ನಾಗಾಲ್ಯಾಂಡ್ ನ ಉಪ ಪೊಲೀಸ್ ಮಹಾ ನಿರ್ದೇಶಕ ಎನ್. ರಾಜಶೇಖರ್, ಚಿತ್ರದುರ್ಗದ ಸಹಾಯಕ ಆಯುಕ್ತ ವಿವೇಕ್ ಪ್ರಕಾಶ್, ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವಕರ್ಮ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ವಿ. ಕೃಷ್ಣ ಮೂರ್ತಿ, ಕ್ರೀಡೆಯಲ್ಲಿ ಮಾಜಿ ಹಾಕಿ ಆಟಗಾರ ಸುನಿಲ್ ವಿಠಲಾಚಾರ್ಯ, ಚಿತ್ರಕಲೆಯಲ್ಲಿ ಬಸವರಾಜ ಕಮ್ಮಾರ ಅವರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸ್ಮಾರಕ ಪ್ರಶಸ್ತಿ ವಲಯದಲ್ಲಿ ಖಂಜಿರ ವಿದ್ವಾನ್ ಎಚ್.ಪಿ. ರಾಮಾಚಾರ್ ಪ್ರಶಸ್ತಿಗೆ ವಿಶ್ವ ವಿಖ್ಯಾತ ಖಂಜಿರಾ ವಿದ್ವಾಂಸ ಅಮೃತ್.ಎನ್, ತುಮಕೂರಿನ ಶಿಲ್ಪಿ ದಿ. ಕೆ.ಎಚ್. ರಾಜಶೇಖರಚಾರ್ ಪ್ರಶಸ್ತಿಗೆ ಶಿಲ್ಪಿ ಆರ್. ಚಂದ್ರಚಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿಗೆ ಮಾಜಿ ಅಡ್ವೋಕೆಟ್ ಜನರಲ್ ಬಿ.ವಿ. ಆಚಾರ್ಯ, ಚಿತ್ರನಟ ಅನಿರುದ್ಧ್, ಶಿಕ್ಷಣ ತಜ್ಞ ಡಾ. ವೂಡೆ ಪಿ ಕೃಷ್ಣ, ಹಿರಿಯ ನಟಿ ಲಕ್ಷ್ಮೀ ಗೋಪಾಲ ಸ್ವಾಮಿ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಡಿ.ಎಕ್ಸ್ ಮ್ಯಾಕ್ಸ್ ಸಮೂಹ ಸಂಸ್ಥೆಯ ಡಾ. ಎಸ್.ಪಿ. ದಯಾನಂದ್, ವಾಸ್ತು ಶಿಲ್ಪಿ ನಾಗರಾಜ್ ವಸ್ತಾರೆ, ಯೋಗ ಗುರು ಡಾ.ಎನ್.ಎಸ್. ಓಂಕಾರ್ ಭಾಜನರಾಗಿದ್ದು ಪ್ರಶಸ್ತಿ ಪುರಸ್ಕೃತ ರೆಲ್ಲರಿಗೂ ವಿಶ್ವಕರ್ಮ ಭಾವಚಿತ್ರದ ಸ್ಮರಣಿಕೆ, ಫಲಕ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮೈಸೂರು ಸಂಸ್ಥಾನದ ಅರಸರಾದ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ವರ್ಚುವಲ್ ಸಂದೇಶ ನೀಡುವರು. ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ವಿಶ್ವಕರ್ಮ ಸಂಸ್ಥಾನ ಪೀಠ ಅನುಗ್ರಹ ಸಂದೇಶ ನೀಡಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಸಂಸದರು, ಸಚಿವರು, ಎಂ.ಎ.ಲ್ಸಿ ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ವಿಶ್ವಕರ್ಮ ಸಮುದಾಯದಲ್ಲಿ ಈ ಕಾರ್ಯಕ್ರಮ ಶಿಕ್ಷಣ, ಜಾಗೃತಿ, ಪ್ರಚಾರ. ಹಕ್ಕೊತ್ತಾಯ, ಪುನರುತ್ಥಾನದ ಉದ್ದೇಶಗಳನ್ನು ಒಳಗೊಂಡಿದೆ. ವಿಶ್ವಕರ್ಮ ಸಮುದಾಯದ ಏಳಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು “ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವಕರ್ಮ ಮಹೋತ್ಸವ ಮತ್ತಷ್ಟು ಮಹತ್ವ ಪಡೆದುಕೊಂಡಿದೆ ಎಂದು ಡಾ. ಬಿ.ಎಂ. ಉಮೇಶ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ್ ಐ.ಎ.ಎಸ್ (ನಿ), ಮುಖ್ಯ ಕಾರ್ಯದರ್ಶಿ ಚಂದ್ರಶೇಖರ ಚಾರಿ, ಉಪಾಧ್ಯಕ್ಷರಾದ ಎಸ್. ನಂಜುಂಡ ಪ್ರಸಾದ್ ಹಾಗೂ ಶಿಲ್ಪಿ ಹೊನ್ನಪ್ಪ ಚಾರ್ ರವರು ಉಪಸ್ಥಿತರಿದ್ದರು