ಸುದ್ದಿಮೂಲ ವಾರ್ತೆ,
ಮೈಸೂರು.ಸೆ.17:ವಿಶ್ವಕರ್ಮ ಎಂದರೆ ಬ್ರಹ್ಮ. ಬ್ರಹ್ಮನ ಸೃಷ್ಟಿ. ಪ್ರತಿಯೊಂದು ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ ಸಮಿತಿ ಆಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಮುದಾಯದ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಹಾಗೂ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಜಯಂತಿ ಕಾರ್ಯಕ್ರಮಗಳು ತಮ್ಮ ವೇದಿಕೆಯಾಗಿದೆ. ರಾಜ್ಯ ಸರ್ಕಾರ ಪ್ರಸ್ತುತ 52 ಮಹಾನ್ ವ್ಯಕ್ತಿಗಳ ಜಯಂತಿ ಮಹೋತ್ಸವವನ್ನು ಆಚರಣೆಗೆ ತಂದಿದ್ದು, ಸಂಘಟಿತ ಹಾಗೂ ಅಸಂಘಟಿತ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಬೆಳವಣಿಗೆಗೆ ಪೂರಕವಾದ ಚಿಂತನೆಗಳನ್ನು ಸರ್ಕಾರದ ಮುಂದಿಡಲು ಪೂರಕ ಮಾಧ್ಯಮವಾಗಿವೆ ಎಂದರು.
ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಮಾತನಾಡಿ, ವಿಶ್ವಕರ್ಮ ಸಮುದಾಯದವರು ತಮ್ಮ ಕಾಯಕವನ್ನು ದೇವರೆಂದು ಭಾವಿಸಿ, ನಾಡಿಗೆ ಕಾಯಕದ ಮಹತ್ವವನ್ನು ಸಾರಿದ್ದಾರೆ. ಇಂತಹ ಸಮುದಾಯದ ಬೆಳವಣಿಗೆಗೆ ರಾಜ್ಯ ಸರ್ಕಾರ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದರು.
ವಿಧಾನ ಪರಿಷತ್ತಿತ್ ಸದಸ್ಯ ಸಿ.ಎನ್ ಮಂಜೇಗೌಡ ರವರು ಮಾತನಾಡಿ, ಮನುಷ್ಯ ಹೊಸ ವಿಚಾರಗಳನ್ನು ಕಲಿಯಲು ಉತ್ಸುಕನಾಗಬೇಕು. ಬುದ್ಧಿವಂತನಾಗಲು ಇಂತಹ ಕಾರ್ಯಕ್ರಮಗಳಲ್ಲಿ, ಸೆಮಿನಾರ್ ಗಳಲ್ಲಿ ಭಾಗವಹಿಸಬೇಕು. ಏನನ್ನಾದರೂ ಪ್ರಶ್ನಿಸಲು ಒಗ್ಗಟ್ಟುಬೇಕು. ಕೆಲವು ಸಮುದಾಯಗಳಲ್ಲಿ ಇಂದಿಗೂ ಒಗ್ಗಟ್ಟಿನ ಕೊರತೆ ಇದೆ. ಸರ್ಕಾರವನ್ನು ಎಚ್ಚರಿಸಲು ಸಮುದಾಯದ ಜನರಲ್ಲಿ ಒಗ್ಗಟ್ಟಿರಬೇಕು, ಪರಸ್ಪರ ಸಹಕಾರವಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವಕರ್ಮ ಏಕದಂಡಗಿ ಮಠದ ಶಾಡಲಗೇರಿ ಹಾಗೂ ಶ್ರೀ ಕ್ಷೇತ್ರ ಪಂಚನಂದಿ ಪಾಪಗ್ನಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಸೂರ್ಯನಾರಾಯಣ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ, ವಿಧಾನ ಪರಿಷತ್ ಸದಸ್ಯ.ಡಾ. ಡಿ ತಿಮ್ಮಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ ಗೋವಿಂದರಾಜು, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ ಇದ್ದರು.