ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.19: ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯನ್ನು ‘ಭ್ರಷ್ಟರ ಸಂತೆ’ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ನೇರವಾಗಿ ಟೀಕಿಸಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರ ಪಂಚ ಗ್ಯಾರಂಟಿಗಳನ್ನು ಹೊಗಳಿದರು. ವಿಶ್ವನಾಥ್ ಮಾತಿನಿಂದ ಬಿಜೆಪಿ ನಾಯಕರು ಮುಖಮುಖ ನೋಡಿಕೊಂಡರೆ, ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಮೇಜು ತಟ್ಟಿ ಪ್ರಶಂಸಿದದರು.
ಬಜೆಟ್ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ನಮ್ಮ ಭಾಷಾ ಪ್ರಯೋಗ ಮತ್ತು ಅವಸರದಲ್ಲಿ ಏನಾದರೂ ಮಾತನಾಡಬೇಕು ಎಂಬ ಕಾರಣದಿಂದ ನೀಡುವ ಹೇಳಿಕೆಗಳಿಂದ ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತೇವೆ. ರಾಜಕೀಯವಾಗಿ ಹೇಳಿಕೆ ನೀಡುವಾಗ ಸ್ವಲ್ಪ ಯೋಚನೆ ಮಾಡಬೇಕು. ಏಕೆಂದರೆ ನಾವೆಲ್ಲರೂ ಗಾಜಿನ ಮನೆಯಲ್ಲಿ ಕುಳಿತೇ ಮತ್ತೊಬ್ಬರಿಗೆ ಕಲ್ಲು ಎಸೆಯುತ್ತೇವೆ. ಸತ್ಯ ಹೇಳುವ ಧೈರ್ಯವನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.
ಜನತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಪಡೆದ ಸರ್ಕಾರವೇ ಸಾರ್ವಭೌಮ. ಜಾಗತಿಕವಾಗಿ ಗಣತಂತ್ರ ವ್ಯವಸ್ಥೆಯಲ್ಲಿ ಮರಮೋಚ್ಛ ಸ್ಥಾನದಲ್ಲಿರುವ ಭಾರತ ದೇಶದ ಪ್ರಧಾನಮಂತ್ರಿಗಳು ಬೆಂಗಳೂರಿನಲ್ಲಿ ನಡೆದ ವಿಪಕ್ಷ ಸಭೆಯನ್ನು ಭ್ರಷ್ಟರ ಸಂತೆ ಎಂದು ಹೇಳುತ್ತಾರೆ. ಇಂತಹ ಮಾತುಗಳು ಉನ್ನತ ಸ್ಥಾನದಲ್ಲಿ ಇರುವವರಿಗೆ ಒಳ್ಳೆಯದಾಗಿ ಕಾಣಿಸುವುದಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳೂ ಸಹ ಉತ್ತಮ ಬಜೆಟ್ಗಳನ್ನೇ ನೀಡಿದ್ದಾರೆ. ಬಜೆಟ್ ಎಂದರೆ ಅದು ಪಕ್ಷ ಅಲ್ಲ, ಜನರಿಗಾಗಿ ಆಡಳಿತದಲ್ಲಿರುವ ಸರ್ಕಾರ ರೂಪಿಸುವ ಕಾರ್ಯಕ್ರಮಗಳು ಅಲ್ಲ. ಆದರೆ, ಬಜೆಟ್ ಮುಗಿದ ಬಳಿಕ ಕೆಲ ನಾಯಕರು ಹೇಗೆ ಹೇಳಿಕೆ ನೀಡಿದರು ಎಂದರೆ, ಸುಳ್ಳು ಭರವಸೆಯ ಬಜೆಟ್, ಆರ್ಥಿಕ ಸ್ವೇಚ್ಛಾಚಾರದ ಬಜೆಟ್, ಜನರ ಬಗ್ಗೆ ಕಲ್ಪನೆಯೇ ಇಲ್ಲದ ಬಜೆಟ್ ಎಂದು ಹೇಳಿಕೆಗಳನ್ನು ನೀಡಿದರು. ಮೂರು ಲಕ್ಷ ಕೋಟಿಗಿಂತಲೂ ಅಧಿಕ ಬಜೆಟ್ ಮೀರಿದ ಬಜೆಟ್ ನೀಡಬೇಕಾದರೆ ತೆರಿಗೆ ಪಾವತಿ ಮಾಡಿದ ಒಬ್ಬರೂ ಕೃತಜ್ಞತೆ ಹೇಳುವುದಿಲ್ಲ. ಎಲ್ಲರೂ ಅವರವರ ರಾಜಕೀಯ ನೇರಕ್ಕೆ ಮಾತನಾಡುತ್ತಾರೆ ಎಂದು ಹೇಳಿದರು.
1978ರ ಫೆಬ್ರುವರಿಯಲ್ಲಿ ನಾನು ಶಾಸಕಾಗಿ ಬಂದೆ. ಆಗ ಶಾಸಕರಿಗೆ ವೇತನ ಅಲ್ಲ, ಗೌರವಧನ ಎಂದು 650 ರೂ. ಕೊಡುತ್ತಿದ್ದರು. ಅಧಿವೇಶನ ದಿನಭತ್ಯೆ 50 ರೂ. ಇತ್ತು. ಹೋರಾಟದ ಫಲವಾಗಿ ಮಾಜಿ ಶಾಸಕರಿಗೆ ಮಾಸಿಕ 350ರೂ. ಗೌರವ ಧನ ನಿಗದಿಪಡಿಸಲಾಯಿತು. ಆದರೆ, ಈಗ ಒಬ್ಬ ಶಾಸಕನಿಗೆ ತಿಂಗಳಿಗೆ ವೇತನ ಸಹಿತ ಎಲ್ಲಾ ಸೌಲಭ್ಯಗಳು ಸೇರಿ 2.5 ಲಕ್ಷ ರೂ. ದೊರೆಯುತ್ತದೆ. ಮಾಜಿ ಶಾಸಕರ ಪಿಂಚಣಿ 45,000ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು.
ಶಾಸಕಾಂಗ ಮತ್ತು ಸರ್ಕಾರದ ನಡವಳಿಕೆಗಳ ಬಗ್ಗೆ ಜನರು ಗಮನಿಸುತ್ತಾರೆ. ಆದರೆ, ಈಗ ನಮ್ಮ ಸದನಗಳಲ್ಲಿ ನಮ್ಮ ಜಗಳಗಳೇ ತುಂಬಿ ಹೋಗಿವೆ. ಹಿಂದೆ ಮಾಧ್ಯಮಗಳು ಸಹ ಶಾಸನ ಸಭೆಯ ನಡವಳಿಗಳನ್ನು ಬಹಳ ಸೊಗಸಾಗಿ ಬಿಂಬಿಸುತ್ತಿದ್ದಾರೆ. ಆದರೆ, ಈಗ ಅವರಿಗೂ ಸಹ ಇಲ್ಲಿನ ಜಗಳಗಳೇ ಮುಖ್ಯವಾಗಿ ಕಾಣಿಸುತ್ತಿವೆ. ಇದಕ್ಕೆ ಕಾರಣ ಬಹುತೇಕ ಶಾಸಕರು ಸಿದ್ಧತೆ ಮತ್ತು ಬದ್ಧತೆ ಇಲ್ಲದೆ ಸದನಕ್ಕೆ ಬರುತ್ತಿರುವುದೇ ಕಾರಣವಾಗುತ್ತಿದೆ. ಶಾಕಾಂಗ ನಡುವಳಿಕೆ ಮತ್ತು ವ್ಯತ್ಯಾಸಗಳನ್ನು ಶಾಸಕಾಂಗ ನಾಯಕರಾದ ನಾವೇ ಸರಿಪಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಆರಂಭಿಸಬೇಕು ಎಂದು ಹೇಳಿದರು.
ಅನ್ನ ದೇವರನ್ನು ಕೊಟ್ಟ ಸಿದ್ದರಾಮಯ್ಯ:
ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಮತ್ತು ಜನರಿಗೆ ನೀಡಿದ ಗ್ಯಾರಂಟಿಗಳು ಅತ್ಯುತ್ತಮವಾಗಿವೆ. ಸರ್ಕಾರ ನೀಡಿದ ಭಾಗ್ಯಗಳನ್ನು ಬಿಟ್ಟಿ ಭಾಗ್ಯಗಳು ಎಂದು ಕೆಲವರು ಮಾತನಾಡಿದರು. ಆದರೆ, ಬಡವನ ಅನ್ನವನ್ನು ತಿರಸ್ಕಾರದಿಂದ ನೋಡಬಾರದು. ‘ಅನ್ನತೋ ಪ್ರಾಣಹ, ಪ್ರಾಣತೋ ಪರಾಕ್ರಮ’ ಎಂಬಂತೆ ಅನ್ನ ದೇವರನ್ನು ಪ್ರತಿ ಮನೆಗೆ ಕೊಟ್ಟ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸಿದರು.
ಮಹಿಳೆಯರಿಗೆ ಉಚಿತ ಬಸ್ಪಾಸ್ ಕೊಟ್ಟಿದ್ದರಿಂದ ಬಡ ಮಹಿಳೆಯರು ಪ್ರವಾಸ ತೆರಳಿ, ದೇವಸ್ಥಾನಗಳನ್ನು ನೋಡಿ ತಮ್ಮ ಮನಸ್ಸನ್ನು ಹಗರು ಮಾಡಿಕೊಂಡಿದ್ದಾರೆ. ದುಡಿಯುವ ಮಹಿಳೆಯರಿಗೂ ಅನುಕೂಲವಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಸ್ವಂತ ಉದ್ಯೋಗ ಮಾಡಲು ಹಂಬಲಿಸುವಂತಹ ಸಾಕಷ್ಟು ಮಹಿಳೆಯರಿಗೆ ಕೈಗೊಂದಿಷ್ಟು ಹಣ ಬಂದು ಬೆಳೆಯಲು ಅನುಕೂಲವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವನಾಥ್ ಮಾತಿನಿಂದ ಬಿಜೆಪಿ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡದೆ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತಿದ್ದರೆ, ಅತ್ತ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಟೇಬಲ್ಗಳನ್ನು ತಟ್ಟಿ ಮೆಚ್ಚುಗೆವ್ಯಕ್ತಪಡಿಸುತ್ತಿದ್ದರು.