ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.31: ಕಲ್ಯಾಣ ಕರ್ನಾಟಕ ಭಾಗದ ಸಚಿವರು ಮತ್ತು ಜನಪ್ರತಿನಿಧಿಗಳ ನಿಯೋಗ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಮಂಗಳವಾರ ಭೇಟಿ ಮಾಡಿ ಕಲ್ಯಾಣ ಕರ್ನಾಟಕ ಮಂಡಳಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಳ್ಳುತ್ತಿರುವ ಯೋಜನೆಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರಾದ ಎನ್.ಎಸ್ ಬೋಸರಾಜು, ಶರಣ ಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಜಯ್ ಸಿಂಗ್, ಯೋಜನೆ ಮತ್ತು ಸ್ಯಾಂಖಿಕ ಸಚಿವರಾದ ಡಿ ಸುಧಾಕರ್ ಸೇರಿದಂತೆ ಆ ಭಾಗದ ಶಾಸಕರ ನಿಯೋಗ ಭೇಟಿ ಮಾಡಿ ಚರ್ಚಿಸಿತು.
ಈ ವೇಳೆ ಕಲ್ಯಾಣ ಕರ್ನಾಟಕ ಭಾಗದ ವಿಶ್ವವಿದ್ಯಾನಿಲಯಗಳನ್ನು ಬಲಪಡಿಸುವ ಹಾಗೂ ಶೈಕ್ಷಣಿಕವಾಗಿ ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿ ಪಡಿಸುವ ಯೋಜನೆಗಳನ್ನ ಹಮ್ಮಿಕೊಳ್ಳುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಿಯೋಗಕ್ಕೆ ಸಲಹೆ ನೀಡಿದರು.
ನಂಜುಂಡಪ್ಪ ವರದಿಯ ಅನ್ವಯ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಯೋಜಿಸಲಾಗಿದೆ. ಶಿಕ್ಷಣಕ್ಕೆ ಅಭಿವೃದ್ಧಿ ಮಂಡಳಿಯ ಅನುದಾನದ ಶೇಕಡಾ 25 ರಷ್ಟು ಮಿಸಲಿಟ್ಟಿರುವುದನ್ನು ರಾಜ್ಯಪಾಲರಿಗೆ ತಿಳಿಸಲಾಯಿತು.