ಬೆಂಗಳೂರು, ಏ.14: ಯಲಹಂಕ ವ್ಯಾಪ್ತಿಯ ರೈಲ್ವೆ ನಿಲ್ದಾಣ, ಆರ್.ಎಂ.ಝಡ್ ಮಾಲ್, ಪೆಟ್ರೋಲ್ ಬಂಕ್, ಬಸ್ ಪ್ರಯಾಣಿಕರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳೊಂದಿಗೆ ಬಿಬಿಎಂಪಿ ವಲಯ ಜಂಟಿ ಆಯುಕ್ತೆ ಪೂರ್ಣಿಮಾ ನೇತೃತ್ವದಲ್ಲಿ ಇಂದು ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.
ಮೊದಲಿಗೆ ಯಲಹಂಕ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಮತದಾನ ದಿನದ ಬ್ಯಾನರ್ ಹಾಗೂ ಜಾಗೃತಿ ಮೂಡಿಸುವ ಬಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ತಪ್ಪದೆ ಮತದಾನ ಮಾಡಲು ಅರಿವು ಮೂಡಿಸಲಾಯಿತು.
ಆರ್.ಎಂ.ಝಡ್ ಮಾಲ್ ಗೆ ಬಂದಂತಹ ನಾಗರಿಕರು ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಮತದಾನ ಮಾಡುವ ಬಗ್ಗೆ ತಿಳುವಳಿಕೆ ನೀಡಿ ಮತದಾನ ದಿನ ಎಲ್ಲರೂ ತಪ್ಪದೆ ಮತದಾನ ಮಾಡಲು ತಿಳಿಸಿದರು.
ಇನ್ನು ಯಲಹಂಕ ಎನ್.ಇ.ಎಸ್ ಬಸ್ ನಿಲ್ದಾಣದ ಬಳಿಯ ಪೆಟ್ರೋಲ್ ಬಂಕ್ ಸಿಬ್ಬಂದಿ ವರ್ಗ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಮತದಾನ ಮಾಡುವ ಬಗ್ಗೆ ಮತದಾನ ಸಂಕಲ್ಪವನ್ನು ಮಾಡಲಾಯಿತು.
ಮಾನವ ಸರಪಳಿ ಮೂಲಕ ಜಾಗೃತಿ:
ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರೊಂದಿಗೆ ಮಾನವ ಸರಪಳಿಯನ್ನು ರಚಿಸಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಲು ಎಲ್ಲರಲ್ಲೂ ಜಾಗೃತಿ ಮೂಡಿಸಲಾಯಿತು.
ಜಾಗೃತಿ ಕಾರ್ಯಕ್ರಮದಲ್ಲಿ ಉಪ ಆಯುಕ್ತರಾದ ಮಮತಾ, ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.