ಸುದ್ದಿಮೂಲ ವಾರ್ತೆ
ಆನೇಕಲ್, ಏ.14: ತಾಲ್ಲೂಕು ಪಂಚಾಯತಿ ಇಒ ಲಕ್ಷ್ಮೀ ನಾರಾಯಣಸ್ವಾಮಿ ಹಾಗು ಪೊಲೀಸ್ ಇಲಾಖೆ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಮತ್ತು ಆನೇಕಲ್ ತಾಲ್ಲೂಕು ಕಛೇರಿ ವತಿಯಿಂದ ಮತದಾನ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ತರಕಾರಿ ಮಾರ್ಕೆಟ್ ಬಳಿ ಸಾರ್ವಜನಿಕರಿಗೆ ಮತದಾನದ ಮಹತ್ವವನ್ನು ತಿಳಿಸಲಾಯಿತು. ಮತ ಯಾಕೆ ಹಾಕಬೇಕು, ಅದರ ಮಹತ್ವ ಏನು, ಮತ ಹಾಕದಿದ್ದರೆ ಸಮಾಜದ ಮೇಲೆ ಯಾವ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಬೀದಿ ನಾಟಕದ ಮೂಲಕ ತೋರಿಸಲಾಯಿತು.
ಬೆಳಂಬೆಳಗ್ಗೆ ತರಕಾರಿ ಕೊಳ್ಳಲು ಬಂದವರು, ವಾಕಿಂಗ್ ತೆರಳಿದವರು ಮತದಾನದ ಜಾಗೃತಿ ನಾಟಕ ನೋಡಿ ಮೆಚ್ಚುಗೆ ಸೂಚಿಸಿದರು. ಅಲ್ಲದೆ, ತಾವೂ ಸಹ ಮತ ಚಲಾಯಿಸುವುದಾಗಿ ಭರವಸೆ ನೀಡಿದರು.