ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.9: ತಾಲ್ಲೂಕಿನ ಈ ಹಿಂದೆ ಕಡಿಮೆ ಮತದಾನ ಆಗಿರುವಂತಹ ಕೇಂದ್ರಗಳಾದ ನಲ್ಲಿಮರದಹಳ್ಳಿ ಚರ್ಚ್ ಹಾಗೂ ರಹಮತ್ ನಗರದ ಮತದಾನ ಕೇಂದ್ರಗಳಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಭೇಟಿ ನೀಡಿ, ಈ ಹಿಂದೆ ಅತಿ ಕಡಿಮೆ ಮತದಾನ ಆಗಿರುವ ಕೇಂದ್ರಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆ-2023 ರಲ್ಲಿ ಹೆಚ್ಚು ಹೆಚ್ಚಿಗೆ ಮತದಾನ ಮಾಡುವಂತೆ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಮೂಡಿಸಲಾಯಿತು.
ನನ್ನ ಮತ ಮಾರಾಟಕ್ಕಿಲ್ಲ, ನಾನು ಮತದಾನ ತಪ್ಪಿಸುವುದಿಲ್ಲ. ಅದೇ ರೀತಿಯಾಗಿ ಉತ್ತಮ ಪ್ರಜಾ ಪ್ರಭುತ್ವಕ್ಕಾಗಿ ನಾನು ಮತ ಚಲಾಯಿಸುತ್ತೇನೆ ಹಾಗೂ ನೈತಿಕವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತೇನೆ ಎನ್ನುವುದು ಪ್ರತಿಯೊಬ್ಬರ ಧ್ಯೇಯವಾಗಿರಬೇಕು. ಚುನಾವಣೆ ಎಂಬುವುದು ಪ್ರಜಾ ಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾ ಪ್ರಭುತ್ವವನ್ನು ಬಲಪಡಿಸೋಣ ಎಂದರು. ಈ ವೇಳೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜ ಅವರು, ನಗರಸಭೆ ಕಮಿಷನರ್ ಶ್ರೀನಾಥ್, ಸಿಡಿಪಿಓ ನೌತಾಜ್, ಮಸೀದಿ ಸಮಿತಿಯ ಪದಾಧಿಕಾರಿಗಳು, ಮುಖ್ಯಸ್ಥರು ಸೇರಿದಂತೆ ಇತರರು ಹಾಜರಿದ್ದರು.