ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.26: ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನವಾಗಲಿದ್ದು, ಆ ದಿನ ಎಲ್ಲಾ ಯುವ ಮತದಾರರು ತಪ್ಪದೆ ಮತ ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಲ್ಲಾ ವಿದ್ಯಾರ್ಥಿಗಳಲ್ಲಿ ಕೋರಿದರು.
ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಸುರಾನಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಯುವ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಗರದ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1.43 ಲಕ್ಷಕ್ಕೂ ಅಧಿಕ ಮತದಾರರಿದ್ದು, ಅಷ್ಟೂ ಮತದಾರರು ತಪ್ಪದೆ ಮತ ಚಲಾಯಿಸಬೇಕು. ಜೊತೆಗೆ ಅಷ್ಟೂ ಮಂದಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಇತರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದರಿಂದ ಮತದಾನದ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ನಗರದಲ್ಲಿ ಹೆಚ್ಚು ಮಂದಿ ವಿದ್ಯಾವಂತರಿದ್ದರೂ ಕೂಡಾ ಮತದಾನದ ಪ್ರಮಾಣ ಮಾತ್ರ ಕಡಿಮೆಯಿದೆ. ಮತದಾನ ಮಾಡದೆ ಅಸಡ್ಡೆ ತೋರುವವರಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡುವಂತೆ ಮಾಡಬೇಕು. ಜೊತೆಗೆ ನಗರದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಮತದಾನ ಸಂಕಲ್ಪ ನಾಟಕ ಪ್ರದರ್ಶನ:
ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿಯ ನಾಟಕ ತಂಡವು ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆಯನ್ನು ತಿಳಿಸುವ “ಮತದಾನ ಸಂಕಲ್ಪ” ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞೆ ವಿಧಿಯನ್ನು ಸ್ವೀಕರಿಸಿದರು.
ಈ ವೇಳೆ ಸ್ವೀಪ್ ನೋಡಲ್ ಅಧಿಕಾರಿಯಾದ ಸಿದ್ದೇಶ್ವರ, ಉಪ ಆಯುಕ್ತರಾದ ಲಕ್ಷ್ಮೀದೇವಿ, ಸುರಾನಾ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಎನ್.ಎಸ್ ಕುಮಾರ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.