ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.11: ಪ್ರಜಾಪ್ರಭುತ್ವದ ಯಶಸ್ಸು ಚುನಾವಣೆಯಲ್ಲಿ ಗರಿಷ್ಠ ಮತದಾನದೊಂದಿಗೆ ಆಂತರಿಕವಾಗಿ ಸಂಬಂಧ ಹೊಂದಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಸ್ವೀಪ್ ಕಾರ್ಯಕ್ರಮದಡಿ ಓಆರ್ಸಿಸಿಎ ಸಹಯೋಗದೊಂದಿಗೆ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಇಂದು ನಡೆದ ಮಾತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಐಟಿ-ಬಿಟಿ ಸಂಸ್ಥೆ, ಕೈಗಾರಿಕಾ ಪ್ರದೇಶಗಳಲ್ಲಿ ಮತದಾನ ಜಾಗೃತಿ ವೇದಿಕೆ ಸಿದ್ದಪಡಿಸಕೊಂಡು ಆ ಮೂಲಕ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಾರ್ವತ್ರಿಕ ವಿಧಾನಸಭೆ ಚುನಾವಣೆಗಾಗಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಮೇ 13ರಿಂದ 20 ರವರೆಗೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಆ ದಿನ ಮತದಾನ ಮಾಡುವ ಉದ್ದೇಶಕ್ಕಾಗಿ ಐಟಿ-ಬಿಟಿ ಸಂಸ್ಥೆ, ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ರಜೆಯನ್ನು ನೀಡಲಾಗುತ್ತದೆ. ಎಲ್ಲರೂ ಮತದಾನ ಮಾಡಬೇಕೆಂಬ ಉದ್ದೇಶದಿಂದ ರಜೆಯನ್ನು ನೀಡಲಾಗುತ್ತದೆ. ಆದರೆ, ಅದನ್ನು ಸಾಕಷ್ಟುಮಂದಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ಸಂಬಂಧ ಮತದಾನ ದಿನ್ನು ಅನ್ಯಕಾರ್ಯಗಳಿಗೆ ಬಳಸಿಕೊಳ್ಳದೆ ಮತಗಟ್ಟೆಗಳಿಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.
ಮತದಾನ ಪಟ್ಟಿಯಲ್ಲಿ ಹೆಸರಿರುವವರಿಗೆ 10 ದಿನದ ಮುಂಚಿತವಾಗಿಯೇ ಮತದಾನ ಮಾಡುವ ಚೀಟಿಯನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಓಟರ್ ಹೆಲ್ಪ್ ಲೈವ್ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಮತದಾನ ಮಾಡುವ ಮತಗಟ್ಟೆಯ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ವಿಶಿಷ್ಟ ಚೇತನರ ಐಕಾನ್ ರಂಜನಿರಾಮಾನುಜಮ್ ರವರು ಮಾತನಾಡಿ, ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸೋಣ, ಎಲ್ಲರೂ ತಪ್ಪದೆ ಮತದಾನ ಮಾಡಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸೋಣ. ಇದು ನಮ್ಮೆಲ್ಲ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಜಂಟಿ ಆಯುಕ್ತರಾದ ಪಲ್ಲವಿ, ಮತದಾನ ಜಾಗೃತಿ ಮೂಡಿಸುವ ನಮ್ಮ ಬೆಂಗಳೂರು ಐಕಾನ್ಸ್ ಗಳಾದ ಮಾಸ್ಟರ್ ಆನಂದ್, ಮೋಹನ್ ಕುಮಾರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.