ಬೆಂಗಳೂರು, ಮೇ 11- ಇವಿಎಂ ತಾಂತ್ರಿಕ ದೋಷ ಹಾಗೂ ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಧಾವಿಸಿದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ವಿವಿಧೆಡೆ ರಾತ್ರಿ 10 ಗಂಟೆವೆರೆಗೆ ಮತದಾನ ಪ್ರಕ್ರಿಯೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.85.35 ಮತದಾನವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ 2 ಮತಗಟ್ಟೆ ಹಾಗೂ ಗೌರಿಬಿದನೂರು ಕ್ಷೇತ್ರದ 8 ಮತಗಟ್ಟೆಗಳಲ್ಲಿ ರಾತ್ರಿ 10ವರೆಗೆ ಮತದಾನ ನಡೆದಿದ್ದು ಕಂಡುಬಂತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಜೆ ವೇಳೆಗೆ ಶೇ.88.9 ಮತದಾನ ನಡೆದಿದೆ ಎಂದು ಜಿಲ್ಲಾಧಿಕಾರಿ ಎನ್.ಎಮ್. ನಾಗರಾಜ್ ಮಾಹಿತಿ ನೀಡಿದ್ದರು. ನಂತರ ಅಂತಿಮವಾಗಿ ಜಿಲ್ಲೆಯಲ್ಲಿ ಶೇ.85 ಮತದಾನ ದಾಖಲಾಗಿದೆ.
ಗೌರಿಬಿದನೂರು ಕ್ಷೇತ್ರ ಶೇ. 85.09, ಬಾಗೇಪಲ್ಲಿ ಶೇ. 85.38, ಚಿಕ್ಕಬಳ್ಳಾಪುರ ಶೇ. 86.90, ಶಿಡ್ಲಘಟ್ಟ ಶೇ. 86.34, ಚಿಂತಾಮಣಿ ಶೇ. 83.38 ಸೇರಿ ಜಿಲ್ಲೆಯಲ್ಲಿ ಶೇ.85.35 ಮತದಾನ ನಡೆದಿದೆ.
ನವಲಗುಂದದಲ್ಲಿ ಸಂಜೆ 6 ನಂತರವೂ ವೋಟಿಂಗ್ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸಂಜೆ 6 ಗಂಟೆ ನಂತರವೂ ಮತದಾನ ನಡೆಯಿತು. ಅದೇ ರೀತಿ ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಂಜೆ ವೇಳೆಗೆ ಸುಮಾರು 300ಕ್ಕೂ ಅಧಿಕ ಮತದಾರರು ಬಂದ ಪರಿಣಾಮ ಮತದಾನ ಸಂಜೆ 6 ಗಂಟೆಯ ನಂತರವೂ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋದ ಮತದಾರರು ತಡವಾಗಿ ಮತಗಟ್ಟೆಗೆ ಆಗಮಿಸಿದ ಹಿನ್ನೆಲೆಯಲ್ಲಿ ರಾತ್ರಿ 9.30 ವರೆಗೆ ಮತದಾನ ನಡೆಯಿತು. ಸಂಜೆ 4.50 ಸುಮಾರಿಗೆ 400ಕ್ಕೂ ಹೆಚ್ಚು ಮತದಾರರು ಆಗಮಿಸಿದ್ದರಿಂದ ಎಲ್ಲರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಮತದಾನ ಮುಗಿಯುವಷ್ಟರಲ್ಲಿ ರಾತ್ರಿ 9.30 ಆಗಿತ್ತು.
ಶಿರಾ, ಚಿತ್ರದುರ್ಗದಲ್ಲಿ ಅವಧಿ ಮುಗಿದ ಬಳಿಕವೂ ಹಕ್ಕು ಚಲಾವಣೆ ತುಮಕೂರು ಜಿಲ್ಲೆಯ ಶಿರಾ ಹಾಗೂ ಚಿತ್ರದುರ್ಗದ ಕಬೀರನಂದ ಮತಗಟ್ಟೆ, ಗೌಡರ ಹಟ್ಟಿ ಮತಗಟ್ಟೆ, ಜಾಲಿಕಟ್ಟೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಿದ್ದರಿಂದ ಸಂಜೆಯ ನಂತರವೂ ಮತದಾನ ನಡೆಯಿತು. ಶಿರಾದಲ್ಲಿ 9 ಗಂಟೆ ನಂತರವೂ ಮತದಾನ ನಡೆದಿದ್ದು ಕಂಡುಬಂತು.