ಸುದ್ದಿಮೂಲ ವಾರ್ತೆ
ಚಾಮರಾಜನಗರ, ನ. 08 : ಚಾಮರಾಜನಗರದಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ಮುಂದುವರಿದಿದೆ. ಕಾವೇರಿ ವಿಚಾರದಲ್ಲಿ ಸರ್ಕಾರ ಕಿವುಡಾಗಿದೆ ಎಂದು ಕಿವಿ ಮುಚ್ಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಸಹ ಪ್ರತಿಭಟನೆ ಮಾಡಿದರು. ಕಳೆದ 59 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕನ್ನಡಪರ ಸಂಘಟನೆಗಳು ಇಂದು ಕೂಡ ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಿಂದ ಕಿವಿಗಳನ್ನು ಮುಚ್ಚಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ರಸ್ತೆಯುದ್ದಕ್ಕೂ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕಾವೇರಿ ನೀರನ್ನು ಹರಿಸುತ್ತಿರುವ ಸರ್ಕಾರ ಕಿವಿ ಇಲ್ಲದ ಸರ್ಕಾರ. ಅನ್ಯಾಯದ ಆದೇಶ ಕೊಡುತ್ತಿರುವ ಕಾವೇರಿ ನೀರು ನಿರ್ವಹಣಾ ಮಂಡಳಿ ಕಿವುಡು ಸಮಿತಿಯಾಗಿದೆ ಎಂದು ಕಿಡಿಕಾರಿದರು.
ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಜಾನಪದ ಕಲಾವಿದರು ಹಾಗೂ ಮೊತ್ತಹಳ್ಳಿ ಗ್ರಾಮಸ್ಥರು ಬೆಂಬಲ ನೀಡಿದ್ದಾರೆ. ಧರಣಿಯಲ್ಲಿ ಕುಳಿತು ಜಾನಪದ ಹಾಡು ಹಾಡುವ ಮೂಲಕ ಕಾವೇರಿ ಹೋರಾಟ ನಡೆಸಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಿರಂತರ ಧರಣಿ ನಡೆಸಿದ್ದಾರೆ.
ಕಳೆದ 65 ದಿನಗಳಿಂದ ಕಾವೇರಿ ಹೋರಾಟ ನಡೆಯುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ನೀರು ನಿಲ್ಲಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ಧರಣಿಯಲ್ಲಿ ರೈತ ನಾಯಕಿ ಸುನಂದಾ ಜಯರಾಂ, ಕನ್ನಡ ಸೇನೆ ಮಂಜುನಾಥ್, ನಾರಾಯಣ್, ಸೇರಿ ಹಲವರು ಭಾಗಿಯಾಗಿದ್ರು. ಕಾವೇರಿಗಾಗಿ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದಾರೆ.