ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 22 : ವಿಭಿನ್ನ ಪ್ರತಿಭಟನೆಗಳ ಮೂಲಕ ರಾಜ್ಯದ ಗಮನಸೆಳೆದಿರುವ ಹಾಗೂ ಸದಾ ಪ್ರತಿಭಟನೆ ನಡೆಸುವ ವಾಟಾಳ್ ನಾಗರಾಜ್ ಈ ಬಾರಿ ಮತ್ತೊಮ್ಮೆ ವಿಭಿನ್ನ ಕಾರಣಕ್ಕಾಗಿ ಪ್ರತಿಭಟನೆ ನಡೆಸಿದರು.
ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎನ್ನುತ್ತ ಜನರ ಆಕರ್ಷಿಸುವ ವಾಟಾಳ್, ಇವತ್ತು ಅತೃಪ್ತ ಪುರುಷರ ಪರ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ಮಹಿಳೆಯರಿಗೆ ನೀಡಿರುವ ‘ಉಚಿತ ಭಾಗ್ಯಗಳ’ ಯೋಜನೆಯನ್ನು ಪುರುಷರಿಗೂ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಉಚಿತ ಭಾಗ್ಯಗಳನ್ನು ನೀವು ಮಹಿಳೆಯರಿಗೆ ಮಾತ್ರ ನೀಡುತ್ತಿದ್ದೀರಿ. ಸಾರಿಗೆ ಇಲಾಖೆಯ ಬಸ್ಸಿನಲ್ಲಿ ಪುರುಷರಿಗೂ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪುರುಷರಿಗೆ ಉಚಿತ ಪ್ರಯಾಣ ಜಾರಿ ಮಾಡುವಂತೆ ಆಗ್ರಹಿಸಿ, ಬೇಕೆ.. ಬೇಕು ಪುರುಷರಿಗೂ ಉಚಿತ ಭಾಗ್ಯ. ಉಚಿತ ಭಾಗ್ಯ ಬೇಕೇ.. ಬೇಕು ಎಂದು ಘೋಷಣೆ ಕೂಗಿದರು. ಜೊತೆಗೆ ಬಿಎಂಟಿಸಿ ಬಸ್ ಹತ್ತಿ ಟಿಕೆಟ್ ಪಡೆಯದೇ ಪ್ರಯಾಣ ಮಾಡುವ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.