ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 16 : ಕಾವೇರಿಗಾಗಿ ಜೈಲ್ ಬರೋ ಚಳವಳಿ ಮಾಡಬೇಕಾಗಬಹುದು ಎಂದು ಕನ್ನಡಪರ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಒಕ್ಕೂಟ ಕಾವೇರಿ ವಿಷಯದ ಕರ್ನಾಟಕ ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ಕಪ್ಪು ಬಾವುಟ ಪ್ರದರ್ಶನದ ಹೋರಾಟದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಕುಡಿಯುವ ನೀರಿಲ್ಲ, ರೈತರ ಹೊಲ ಗದ್ದೆಗಳಿಗೆ ನೀರಿಲ್ಲ, ನೀರಿಲ್ಲದೆ ವಿದ್ಯುತ್ ಇಲ್ಲ. ಕರ್ನಾಟಕ ಕತ್ತಲಲ್ಲಿ ಮುಳಗಿದೆ. ಬೆಂಗಳೂರಿನ ಜನತೆಗೆ ಕುಡಿಯುವುದಕ್ಕೂ ನೀರಿಲ್ಲ ಹಾಗಾಗಿ, ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದರು.
ತಮಿಳುನಾಡಿಗೆ ನೀರು ಬಿಡುವುದರ ವಿರುದ್ಧ ಮತ್ತು ಕಾವೇರಿ ಪ್ರಾಧಾಕಾರವನ್ನೇ ಮುಚ್ಚಬೇಕು ಎಂಬ ವಿಷಯದ ಮೇಲೆ ನಾಳೆ ವಿಧಾನಸೌಧ ಚಲೋ ಮಾಡುತ್ತೇವೆ. ನಾಡಿದ್ದು ಕರ್ನಾಟಕ ತಮಿಳುನಾಡಿನ ಗಡಿ ಭಾಗಕ್ಕೆ ನುಗ್ಗುತ್ತೇವೆ. ಅಲ್ಲಿಗೂ ಸರಕಾರ ಬಗ್ಗದಿದ್ದರೆ ಮುಂದೆ ಜೈಲ್ ಬಾರೋ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ಹುಲಿ ಆಗಿದ್ದರು. ಮುಖ್ಯಮಂತ್ರಿ ಆದಮೇಲೆ ಪಂಜರದ ಗಿಳಿ ಆಗಿದ್ದಾರೆ. ಪಂಜರದಿಂದ ಈಚೆ ಬರುವುದು ಒಂದು ಭವಿಷ್ಯದ ಕಾರ್ಡ್ ತೆಗೆದು ಯಜಮಾನನಿಗೆ ಕೊಟ್ಟು ಮತ್ತೆ ಪಂಜರ ಸೇರುವುದು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು .
ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಇಬ್ಬಿಬ್ಬರು ಇದ್ದರೂ ರಾಜ್ಯಕ್ಕೆ ಇಷ್ಟು ಅನ್ಯಾಯವಾಗುತ್ತಿದೆ. ಆದಕಾರಣ ತತ್ ತಕ್ಷಣ ವಿಧಾನ ಮಂಡಳ ಅಧಿವೇಶನ ಕರೆದು ಪ್ರಾಧಿಕಾರ ರದ್ದತಿಗೆ ಆದೇಶ ಮಾಡಿ ರಾಜ್ಯದ ಜನತೆಗೆ ತಿಳಿಸಬೇಕು. ಇದೇ ಮಾದರಿ ತಮಿಳುನಾಡು ತನ್ನ ರಾಜ್ಯದ ಪರವಾಗಿ ಮಾಡುತ್ತದೆ. ಕರ್ನಾಟಕಕ್ಕೆ ಯಾಕೆ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸದರು ಎಲ್ಲಿ ಮರೆಯಾಗಿದ್ದರೋ ಗೊತ್ತಿಲ್ಲ. ಆ ಭಾಗದ ಸಂಸದರೇ ಪತ್ತೆಯಿಲ್ಲ. ಈ ರೀತಿ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಇನ್ನು ನಮ್ಮ ಸಂಘಟನೆ ತೀವ್ರ ಪ್ರತಿಭಟನೆಗೆ ತೊಡಗಿಕೊಳ್ಳಬೇಕಾಗಬಹುದು ಎಂದು ಎಚ್ಚರಿಸಿದರು.