ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.26: ನೆನೆಗುದಿಗೆ ಬಿದ್ದಿರುವ ಬಹದ್ದೂರ ಬಂಡಿ ಏತ ನೀರಾವರಿಯಿಂದ ಅಕ್ಟೋಬರ ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಎತ್ತಲಾಗುವುದು. ಮುಂಗಾರು ಹಂಗಾಮಿಗೆ ರೈತರ ಭೂಮಿಗೆ ನೀರು ಹರಿಸಲಾಗುವುದು ಎಂದು ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಇಂದು ಕೊಪ್ಪಳ ತಾಲೂಕಿನ ಮುಂಡರಗಿ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆಯನ್ನು ವೀಕ್ಷಿಸಿದ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
2018 ರಲ್ಲಿ ಆರಂಭವಾದ ಏತ ನೀರಾವರಿ ಯೋಜನೆಯು 18 ತಿಂಗಳಲ್ಲಿ ಮುಗಿಯಬೇಕಿತ್ತು. ಹಿಂದಿನ ಸರಕಾರದಲ್ಲಿ ಅನುದಾನ ನೀಡದೆ. ಕೊರೊನಾ ಕಾರಣಕ್ಕಾಗಿ ಯೋಜನೆ ಪೂರ್ಣವಾಗಿಲ್ಲ. ಈಗ ಮತ್ತೆ ಚಾಲನೆ ನೀಡಲಾಗಿದೆ ಎಂದರು.
ಜಾಕ್ ವೆಲ್ ನಿರ್ಮಾಣಕ್ಕಾಗಿ 55 ಕೋಟಿ ರೂಪಾಯಿ ಮಂಜೂರಾಗಿದೆ. ಅದರಲ್ಲಿ 33 ಕೋಟಿ ರೂಪಾಯಿ ಕಾಮಗಾರಿ ಮುಗಿದಿದೆ.ಕಾಲುವೆಗಾಗಿ 120 ಕೋಟಿ ರೂಪಾಯಿ ಯೋಜನೆ ಸಿದ್ದವಾಗಿದೆ. ಎಲ್ಲಾ ಕಾಮಗಾರಿಗಳನ್ನು ಮುಂದಿನ ಮುಂಗಾರು ಹಂಗಾಮಿಗೆ ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೂಳಪ್ಪ. ತೋಟಪ್ಪ ಕಾಮನೂರು, ಶರಣಪ್ಪ ಸಜ್ಜನ, ತುಂಗಭದ್ರಾ ನೀರಾವರಿ ವಲಯದ ಎಇಇ ಶಿವಶಂಕರ ಸೇರಿ ಹಲವರು ಇದ್ದರು.