ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 18: ತಾಲೂಕಿನ ಜಡಗೇನಹಳ್ಳಿ, ಅನುಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ರೈತರಿಗೆ ಈ ಏತ ನೀರಾವರಿ ಯೋಜನೆಯು ವರದಾನವಾಗಲಿದ್ದು, ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗಳ ಕೆರೆಗಳಿಗೆ 2ನೇ ಹಂತದ ವೃಷಭಾವತಿ ವ್ಯಾಲಿ ಯೋಜನೆ ಮೂಲಕ ನೀರು ಪೂರೈಕೆ ಮಾಡುವ ಕಾರ್ಯ ಶೀಘ್ರದಲ್ಲೇ ಮಾಡಲಾಗುವುದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ತಿಳಿಸಿದರು.
ಹೊಸಕೋಟೆ ತಾಲೂಕಿನ 38 ಕೆರೆಗಳಿಗೆ ನೀರು ಹರಿಸುವ ಮಹತ್ವಕಾಂಕ್ಷೆಯ ಏತ ನೀರಾವರಿ
ಯೋಜನೆಯ ಪ್ರಗತಿ ಕಾಮಗಾರಿಯನ್ನು ಶಾಸಕ ಶರತ್ ಬಚ್ಚೇಗೌಡ ಅವರೊಂದಿಗೆ ವೀಕ್ಷಿಸಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ 3 ಹೋಬಳಿಯ 38 ಕೆರಗಳಿಗೆ ಈ ಯೋಜನೆ ಮೂಲಕ ನೀರು ಪೂರೈಕೆ ಮಾಡುವ ಕಾರ್ಯ ಅಂತಿಮ ಹಂತದಲ್ಲಿದ್ದು ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಗೆ ಎರಡನೇ ಹಂತದ ವೃಷಭಾವತಿ ವ್ಯಾಲಿ ನೀರು ಸರಬರಾಜು ಮಾಡಲು ತಕ್ಷಣವೇ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಾಡುವಂತೆ ಸಣ್ಣ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯ ಮೂಲಕ ಹೊಸಕೋಟೆ ತಾಲೂಕಿನ 38 ಕೆರೆಗಳಿಗೆ 43 ಎಂ.ಎಲ್.ಡಿ ಸಂಸ್ಕರಿಸಿದ ನೀರನ್ನು ತುಂಬಿಸುವ 132 ಕೋಟಿ ರೂಪಾಯಿ ವೆಚ್ಚದ ಮಹತ್ತರ ಯೋಜನೆಯ ಕಾಮಗಾರಿಯ ಪ್ರಗತಿ ವೀಕ್ಷಣೆ ಹಾಗೂ ಶುದ್ಧೀಕರಿಸಿದ ನೀರಿನ ಗುಣಮಟ್ಟವನ್ನು ಸಹ ಪರಿಶೀಲನೆ ಮಾಡಿದ್ದೇವೆ. ಮೇಡಹಳ್ಳಿಯಿಂದ ಎಲ್ಲಾ 38 ಕೆರೆಗಳಿಗೆ ಪೈಪ್ ಲೈನ್ ವ್ಯವಸ್ಥೆ ಹಾಗೂ ಮೇಡಹಳ್ಳಿ ಮತ್ತು ಕಾಡುಗೋಡಿಯಲ್ಲಿ ಪಂಪಿಂಗ್ ವ್ಯವಸ್ಥೆ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಟಿ.ಸಿ ಪಾಳ್ಯ
ಜಂಕ್ಷನ್ ನಿಂದ ಮೇಡಹಳ್ಳಿಯವರಗೆ ಹೈವೇ ಮಾರ್ಗದಲ್ಲಿ ಪೈಪ್ ಲೈನ್ ಅಳವಡಿಕೆ ಕಾರ್ಯಪೂರ್ಣಗೊಂಡರೆ ಮುಂದಿನ ತಿಂಗಳ ಸೆಪ್ಟೆಂಬರ್ ಅಂತ್ಯದೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವರಾದ ಎನ್.ಎಸ್.ಭೋಸರಾಜು ಅವರೊಂದಿಗೆ ಚರ್ಚಿಸಿ ತುರ್ತಾಗಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಸದಸ್ಯೆ ಕಮಲಾಕ್ಷಿ, ರಾಜಣ್ಣ , ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಚೀಮಂಡಹಳ್ಳಿ ಮುನಿಶಾಮಣ್ಣ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಬೋಧನಹೊಸಹಳ್ಳಿ ಪ್ರಕಾಶ್, ಶಿವಕುಮಾರ್, ಕೊರಳೂರು ಸುರೇಶ್ ಇನ್ನು ಹಲವಾರು ಮುಖಂಡರು ಹಾಜರಿದ್ದರು.