ಸುದ್ದಿಮೂಲ ವಾರ್ತೆ
ಕೋಲಾರ, ಏ.9: ಚುನಾವಣಾ ಕರ್ತವ್ಯಕ್ಕೆಂದು ಕೇಂದ್ರದಿಂದ ನಿಯೋಜಿಸಿರುವ ಬಿಎಸ್ಪಿ ಯೋಧರು ಕೋಲಾರ ನಗರಕ್ಕೆ ಬಂದಿದ್ದು, ಸಾರ್ವಜನಿಕರು ಹೂ ಎರಚುವ ಮೂಲಕ ಆತ್ಮೀಯ ಸ್ವಾಗತ ಕೋರಿದರು.
ಈ ವೇಳೆ ಯೋಧರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಬಿಎಸ್ಎಫ್ ಪಡೆಗಳು ಹಾಗೂ ಪೊಲೀಸರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಯಿತು. ಮುಸ್ಲಿಂ ಮುಖಂಡರು ಯೋಧರಿಗೆ ಗುಲಾಬಿ ಹೂವು ನೀಡಿದರು. ಬಿಜೆಪಿ ಕಾರ್ಯಕರ್ತೆಯರು ಆರತಿ ಬೆಳಗಿದರು. ಕೆಲವರು ಕುಂಬಳಕಾಯಿ ಒಡೆದು ದೃಷ್ಟಿ ತೆಗೆದರು.
ಅರಹಳ್ಳಿ ಗೇಟ್ನಿಂದ ರೂಟ್ ಮಾರ್ಚ್ ಆರಂಭವಾಯಿತು. ಶ್ರೀನಿವಾಸಪುರ ವೃತ್ತ, ಅಮ್ಮವಾರಿಪೇಟೆ ವೃತ್ತ, ಹೊಸ ಬಸ್ ನಿಲ್ದಾಣ, ಕ್ಲಾಕ್ ಟವರ್, ಡೂಂ ಲೈಟ್ ವೃತ್ತ, ಎಂ.ಜಿ.ರಸ್ತೆಯಲ್ಲಿ ಸಾಗಿತು.
ಪೊಲೀಸ್ ಬ್ಯಾಂಡ್ನವರು ‘ಸಾರೇ ಜಹಾಂಸೇ ಅಚ್ಚಾ’ ನುಡಿಸುತ್ತಾ ಹುರುಪು ತುಂಬಿದರು. ಸಮವಸ್ತ್ರ ಧರಿಸಿದ್ದ ಯೋಧರು ಬಂದೂಕು, ರೈಫಲ್ ಹಿಡಿದು ಸಾಗಿದರು. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ ಜನರಲ್ಲಿ ಭರವಸೆ ತುಂಬಿದರು. ವಿಜಯದ ಚಿಹ್ನೆ ತೋರಿ ಖುಷಿ ವ್ಯಕ್ತಪಡಿಸಿದರು.

