ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.10: ಬಿಜೆಪಿ ಪಟ್ಟಿಯನ್ನು ಇಂದು ಅಥವಾ ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದೂ ಸಹ ಸಭೆ ನಡೆಯಲಿದೆ. ಇಂದು ರಾತ್ರಿ ಅಥವಾ ಒಂದೆರಡು ದಿನಗಳು ಆಗಬಹುದು ಎಂದು ತಿಳಿಸಿದರು.
ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ನಿವಾಸದಲ್ಲಿ ಸಂಜೆ 4ಕ್ಕೆ ಸಭೆ ನಡೆಯಲಿದೆ. ಎಷ್ಟು ಅಭ್ಯರ್ಥಿಗಳು ಅಂತಿಮವಾಗುತ್ತವೆ, ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನು ಪಟ್ಟಿ ಬಿಡುಗಡೆ ಬಳಿಕವಷ್ಟೇ ನೋಡಿ ಎಂದರು.
ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆಯಂತೆ ಎಂದು ಪ್ರಶ್ನಿಸಿದಾಗ, ಸಭೆಯಲ್ಲಿ ಎಲ್ಲವರೂ ಚರ್ಚೆಗೆ ಬರುತ್ತದೆ. ಸಮೀಕ್ಷೆಗಳ ಆಧಾರದ ಮೇಲೆ ಯಾರು ಗೆಲ್ಲಬಹುದು ಎಂಬುದನ್ನು ನಿರ್ಧರಿಸಿ ಟಿಕೆಟ್ ನೀಡಲಾಗುತ್ತದೆ ಎಂದರು.
ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಆಲೋಚನೆಯೂ ಇದೆ. ಹೊಸ ಅಭ್ಯರ್ಥಿಗಳ ಆಯ್ಕೆಯ ಸಂಬಂಧ ಹೆಚ್ಚಿನ ಚರ್ಚೆ ಅಗತ್ಯ ಇರುವುದರಿಂದ ಮತ್ತೊಂದು ಸಭೆ ಕರೆಯಲಾಗಿದೆ. ಬಳಿಕವಷ್ಟೇ ಪಟ್ಟಿ ಅಂತಿಮವಾಗುತ್ತದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.